Site icon PowerTV

ಯಶ್​ ನೋಡಲು ಬಂದ ಇಂಜಿನಿಯರಿಂಗ್ ಟಾಪರ್ ಗೆ ಅಪಘಾತ: ಚಿಕಿತ್ಸೆ ಫಲಿಸದೇ ಸಾವು!

ಗದಗ: ಯಶ್​ ಜನ್ಮದಿನದ ಹಿನ್ನೆಲೆ ಬ್ಯಾನರ್ ಕಟ್ಟಲು ಹೋಗಿದ್ದ ಮೂವರು ಅಭಿಮಾನಿಗಳು ಸಾವಿನ್ನಪ್ಪಿದ ದುರ್ಘಟನೆ ಮಾಸುವ ಮುನ್ನವೇ ರಾಕಿಂಗ್‌ ಸ್ಟಾರ್‌ ಯಶ್ ಮತ್ತೋರ್ವ ಅಭಿಮಾನಿ ಇಂದು ಮೃತಪಟ್ಟಿದ್ದಾರೆ.

ನಿಖಿಲ್ ಗೌಡ (22) ಮೃತ ಯುವಕ, ಈತ ಗದಗದ ಬಿಂಕದಕಟ್ಟಿ ನಿವಾಸಿಯಾದ ಈತ ಲಕ್ಷ್ಮೇಶ್ವರ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು ಇಂಜಿನಿಯರಿಂಗ್ ಟಾಪ್​ ಸ್ಟೂಡೆಂಟ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮತ್ತೆ ಬಂಧನ!

ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದ ಅಭಿಮಾನಿಗಳ ಮನೆಗೆ ಭೇಟಿ ಕೊಟ್ಟ ಯಶ್‌, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ತೆರಳಿದ್ದರು.

ಈ ವೇಳೆ ಯಶ್‌ ನೋಡಲು ನಿಖಿಲ್‌ ಗದಗಕ್ಕೆ ಬಂದಿದ್ದ. ಬಳಿಕ ಯಶ್ ಹುಬ್ಬಳ್ಳಿಗೆ ವಾಪಸ್ಸಾಗುವಾಗ ತನ್ನ ಬೈಕಿನಲ್ಲಿ ಯಶ್ ವಾಹನ ಫಾಲೋ ಮಾಡಲು ಮುಂದಾಗಿದ್ದ. ಈ ವೇಳೆ ಪೊಲೀಸ್ ವಾಹನಕ್ಕೆ ‌ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಪರಿಣಾಮ ನಿಖಿಲ್‌ ಕೂಡ ಗಂಭೀರ ಗಾಯಗೊಂಡಿದ್ದ ಕೂಡಲೇ ಆತನನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ನಿಖಿಲ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಸದ್ಯ ಆಸ್ಪತ್ರೆ ಬಳಿ‌ ನಿಖಿಲ್ ಕುಟುಂಬಸ್ಥರ‌ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version