ಬೆಂಗಳೂರು : ಗದಗದಲ್ಲಿ ನಡೆದ ನಾಲ್ಕು ಅಭಿಮಾನಿಗಳ ದುರ್ಮರಣ ನಟ ಯಶ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಮರೆಯಾಗಿಸಿದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಈ ಹಿಂದೆ ಮಾಡಿದ್ದ ಮನವಿಗಳು ವೈರಲ್ ಆಗುತ್ತಿವೆ.
‘ದಯವಿಟ್ಟು ನಾನು ಗಾಡಿ ಓಡಿಸುವಾಗ ಅಕ್ಕಪಕ್ಕ ಬರಬೇಡಿ. ನಿಮ್ಮ ಮೊಬೈಲ್ ಹಿಡಿದುಕೊಂಡು ಫೋಟೋಗಳಿಗೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ನಾವು 110, 120 ಕಿ.ಮೀ. ಸ್ಪೀಡ್ನಲ್ಲಿ ಹೋಗ್ತಾ ಇರ್ತೀವಿ. ನೀವು ಚೇಸ್ ಮಾಡಿಕೊಂಡು ಬಂದ್ರೆ ಏನಾಗುತ್ತದೆ ಹೇಳಿ. ಬದುಕಿದ್ರೆ ಮತ್ತೆ ನನ್ನ ನೋಡಬಹುದು’ ಎಂದು ಹೇಳಿದ್ದರು.
‘ನನ್ನ ನೋಡದೇ ಇದ್ರೂ ತೊಂದರೆ ಇಲ್ಲ. ಆದರೆ, ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರ್ತಾರೆ. ಆಗತಾನೇ ಮದುವೆ ಆಗಿರ್ತೀರಾ. ಆಗತಾನೇ ಹುಟ್ಟಿದ ಮಗು ಇರುತ್ತದೆ. ಅವರ ಗತಿ ಏನಾಗಬೇಡ? ಅವರು ಸಾಯೋತನಕ ನನ್ನನ್ನು ದೂಷಿಸುತ್ತಾರೆ. ದಯವಿಟ್ಟು ಗಾಡಿಗಳ ಪಕ್ಕ ಬರಬೇಡಿ. ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಿ. ಕೈ ಮುಗಿದು.. ಕಾಲಿಗೆ ಬಿಳ್ತೀವಿ, ಇನ್ಮೇಲೆ ಈತರ ಮಾಡ್ಕೋಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದರು.
ಇದೀಗ ಅಂದು ಹುಬ್ಬಳ್ಳಿಯಲ್ಲಿ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಡಿ ಬಾಸ್ ಹೇಳಿದ ಮಾತುಗಳು ವೈರಲ್ ಆಗುತ್ತಿದೆ. ‘ಡಿ ಬಾಸ್ ಒನ್ಸ್ ಸೆಡ್’ ಎಂಬ ಕ್ಯಾಪ್ಷನ್ನಡಿ ಈ ವಿಡಿಯೋಗಳನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? : ನನಗೆ ಬರ್ತ್ಡೇ ಅಂದ್ರೇನೇ ಅಸಹ್ಯ, ಭಯ ಬಂದು ಬಿಟ್ಟಿದೆ : ನಟ ಯಶ್
4 ಅಭಿಮಾನಿಗಳ ದುರಂತ ಅಂತ್ಯ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ಗ್ರಾಮಕ್ಕೆ ನಟ ಯಶ್ ಭೇಟಿ ನೀಡಿದ ನಂತರ ಹುಬ್ಬಳ್ಳಿಯ ಜಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಾಳುಗಳು ಆರೋಗ್ಯ ವಿಚಾರಿಸಿದ್ದರು. ಬಳಿಕ, ಯಶ್ ವಾಪಸ್ ಆಗುತ್ತಿದ್ದಾಗ ಪೊಲೀಸ್ ಬೆಂಗಾವಲು ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮತ್ತೊಬ್ಬ ಅಭಿಮಾನಿ ಕೊನೆಯುಸಿರೆಳೆದಿದ್ದಾನೆ.