Site icon PowerTV

ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ; 44 ಯುವತಿಯರನ್ನು ರಕ್ಷಿಸಿದ ಸಿಸಿಬಿ

ಬೆಂಗಳೂರು: ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಬ್ಯೂಟಿ ಪಾರ್ಲರ್‌ ಹೆಸರಿನಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಬಯಲಿಗೆಳೆದಿದ್ದಾರೆ.

ಸುಮಾರು 4 ಗಂಟೆ ಬ್ಯೂಟಿ ಪಾರ್ಲರ್‌ನಲ್ಲಿ ಶೋಧ ನಡೆಸಿದ ಸಿಸಿಬಿ ಪೊಲೀಸರು 44 ಯುವತಿಯರನ್ನು ರಕ್ಷಿಸಿದ್ದಾರೆ. ಹಾಗೆಯೇ, 34 ಗಿರಾಕಿಗಳನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ಅನಿಲ್‌ ಎಂಬ ಆಸಾಮಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಓಲ್ಡ್‌ ಮದ್ರಾಸ್‌ ರಸ್ತೆಯಲ್ಲಿರುವ ನಿರ್ವಾಣ ಇಂಟರ್‌ನ್ಯಾಷನಲ್‌ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಕುರಿತು ನಿಖರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿಯು ಸ್ಪಾ ಮೇಲೆ ದಾಳಿ ನಡೆಸಿದ್ದಾರೆ. ಕೂಲಂಕಷ ತಪಾಸಣೆ ಬಳಿಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಬಯಲಾಗಿದೆ.

ಇದನ್ನೂ ಓದಿ: ಕರಸೇವಕ ಶ್ರೀಕಾಂತ ಪೂಜಾರಿ ಜೈಲಿಂದ ಬಿಡುಗಡೆ: ಹಿಂದು ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ!

ಬಹುಮಹಡಿ ಕಟ್ಟದ 1 ಹಾಗೂ 6ನೇ ಫ್ಲೋರ್‌ನಲ್ಲಿ ಸ್ಪಾ ಇದ್ದು,‌ ಕಾನೂನು ಬಾಹಿರವಾಗಿರುವ ಬಾಡಿ ಟು ಬಾಡಿ ಮಸಾಜ್ ಸೇರಿ ಹಲವು ಅನೈತಿಕ ಚಟುವಟಿಕೆ ನಡೆಸಲಾಗುತ್ತಿತ್ತು. ಹೊರ ರಾಜ್ಯದಿಂದ ಬಂದಿರುವ ಅನಿಲ್‌, ಹೊರ ರಾಜ್ಯಗಳು ಹಾಗೂ ಬೇರೆ ದೇಶಗಳಿಂದ ಯುವತಿಯರನ್ನು ಕರೆಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ. ಸುಮಾರು 34 ಕೋಣೆಗಳಲ್ಲಿ ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಐಷಾರಾಮಿ ಕಟ್ಟಡದಲ್ಲಿ, ಸುಸಜ್ಜಿತ ಕೋಣೆಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಹೊರಗಡೆ ಸ್ಪಾ ಎಂದು ಬೋರ್ಡ್‌ ನೇತುಹಾಕಿ, ಒಳಗೆ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಅನಿಲ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸ್ಪಾದಲ್ಲಿದ್ದ 44 ಯುವತಿಯರು ಹಾಗೂ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version