Site icon PowerTV

ಮೈಸೂರಿನಿಂದ ಸ್ಪರ್ಧಿಸಲು ನಾನು ಸಿದ್ಧ : ಯತೀಂದ್ರ ಇಂಗಿತ

ಮೈಸೂರು : ಮೈಸೂರು ಲೋಕಸಭಾ ಚುನಾವಣೆಗೆ ನಾನಂತು ಟಿಕೆಟ್ ಕೇಳಿಲ್ಲ. ಪಕ್ಷ ನಾನೇ ಸ್ಪರ್ಧಿಸಬೇಕು ಅಂದರೆ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ಮೈಸೂರಿನಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಇವತ್ತಿನವರೆಗೆ ಆ ವಿಚಾರದಲ್ಲಿ ಯಾವ ಯೋಚನೆ ಮಾಡಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ. ಈ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಸಂಸದ ಪ್ರತಾಪ ಸಿಂಹ ತಮ್ಮನ್ನ ತಾವು ನ್ಯಾಷನಲ್ ಲೀಡರ್ ಎಂದು‌ಕೊಂಡಿದ್ದಾರೆ. ಸಿದ್ದರಾಮಯ್ಯನವರು ಪ್ರತಾಪ ಸಿಂಹ ಟಾರ್ಗೆಟ್ ಮಾಡಲು ಅವರೇನು ನ್ಯಾಷನಲ್ ಲೀಡರ್ ಹಾ..? ತಾವು ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೇ. ನಮ್ಮ ತಂದೆ ಯಾವತ್ತು ಟಾರ್ಗೆಟ್ ರಾಜಕಾರಣ ಮಾಡಿಲ್ಲ ಎಂದು ಕುಟುಕಿದರು.

ಅವ್ರ ತಮ್ಮ ತಪ್ಪು ಮಾಡಿದ್ದಾರೆ, ಅದಕ್ಕೆ ಕೇಸ್ ಆಗಿದೆ

ತಮಗೆ ರಾಜಕೀಯವಾಗಿ ಅನೇಕ ಬಾರಿ ಅನ್ಯಾಯವಾಗಿದ್ದರು ಕೂಡ, ಅನ್ಯಾಯ ಮಾಡಿದ್ದವರ ವಿರುದ್ಧ ಅವರು ರಾಜಕಾರಣ ಮಾಡಲಿಲ್ಲ. ಇಂತದ್ರಲ್ಲಿ ಪ್ರತಾಪ ಸಿಂಹರನ್ನ ಯಾಕೆ ತಂದೆಯವರು ಟಾರ್ಗೆಟ್ ಮಾಡುತ್ತಾರೆ‌..? ಅವರ ತಮ್ಮ ತಪ್ಪು ಮಾಡಿದ್ದಾರೆ, ಅದಕ್ಕಾಗಿ ಕೇಸ್ ಆಗಿದೆ ಅಷ್ಟೇ. ಇದರಲ್ಲಿ ಟಾರ್ಗೆಟ್ ಎಲ್ಲಿಂದ ಬಂತು..? ತಮ್ಮನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇಲ್ಲಿ ನನ್ನ ರಾಜಕೀಯ ಪ್ರಶ್ನೆಯೇ ಇಲ್ಲ ಎಂದು ಯತೀಂದ್ರ ಹೇಳಿದರು.

Exit mobile version