Site icon PowerTV

ತುಂಡುಡುಗೆ ಧರಿಸಿದ್ದಕ್ಕೆ ಪತಿಯಿಂದ ಪತ್ನಿಯ ಕತ್ತುಸೀಳಿ ಮರ್ಡರ್​!

ಹಾಸನ: ಪತ್ನಿಯು ಯಾವಾಗಲೂ ತುಂಡುಡುಗೆ ಧರಿಸುತ್ತಾಳೆ ಎಂದು ಹಾಸನದಲ್ಲಿ  ವ್ಯಕ್ತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಕತ್ತುಸೀಳಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ರಾಂಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಧಾರವಾಡ ಮೂಲದ ಪತ್ನಿ ಜ್ಯೋತಿ (22) ಯನ್ನು ಪತಿ ಜೀವನ್‌ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಆಕೆಯ ಕತ್ತು ಕುಯ್ದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಬಂದ್!

ಹಾಸನದ ಜೀವನ್‌ ಹಾಗೂ ಧಾರವಾಡದ ಜ್ಯೋತಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಒಂದು ವರ್ಷದ ಹಿಂದಷ್ಟೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಜ್ಯೋತಿ ಅವರು ಮಾಡರ್ನ್‌ ಉಡುಪುಗಳನ್ನು ಧರಿಸುವುದು ಜೀವನ್‌ಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆಯೂ ಜಗಳಗಳು ನಡೆಯುತ್ತಿದ್ದವು. ಶನಿವಾರ ಡಿ.30 ರಂದು ಜ್ಯೋತಿ ತುಂಡುಡುಗೆ ಧರಿಸಿ ಹೊರಗೆ ಹೋಗುತ್ತಿದ್ದರು. ಇದರಿಂದ ಕುಪಿತಗೊಂಡ ಜೀವನ್‌, ಈ ರೀತಿ ಬಟ್ಟೆ ಧರಿಸಿ ಹೊರಗೆ ಹೋಗಬೇಡ ಎಂದು ಗದರಿದ್ದಾರೆ. ಆದರೂ, ಜ್ಯೋತಿಯು ಅದೇ ಬಟ್ಟೆಯಲ್ಲಿ ತೆರಳಲು ಮುಂದಾಗಿದ್ದಾರೆ. ಆಗ ಕೋಪದಲ್ಲಿದ್ದ ಜೀವನ್‌, “ಸರಿ ನಾನೇ ನಿನ್ನನ್ನು ಬಿಟ್ಟು ಬರುತ್ತೇನೆ” ಎಂದು ಕರೆದುಕೊಂಡು ಹೋಗಿದ್ದಾನೆ. ರಾಂಪುರ ಬಳಿಯ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version