Site icon PowerTV

ನ್ಯೂ ಇಯರ್ ಸೆಲೆಬ್ರೇಷನ್​ಗೆ​ ಸಜ್ಜಾಯ್ತು ಸಿಲಿಕಾನ್ ಸಿಟಿ ; ಎಲ್ಲೆಡೆ ಪೊಲೀಸ್‌ ಕಣ್ಗಾವಲು

ಬೆಂಗಳೂರು: 2024ನೇ ವರ್ಷವನ್ನ ಸ್ವಾಗತಿ ಸಿಲಿಕಾನ್ ಸಿಟಿ ಸಜ್ಜಾಗಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಕೋರಮಂಗಲ, ಇಂದಿರಾ ನಗರ ಸೇರಿ ನಗರದ ಪ್ರಮುಖ ರಸ್ತೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ಪಬ್‌ ಮತ್ತು ಹೋಟೆಲ್‌ಗಳತ್ತ ಜನರು ಬರುತ್ತಿದ್ದಾರೆ.

ಇನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲಡೆ ಪೊಲೀಸ್‌ ಬಿಗಿ ಭದ್ರತೆ ಕೂಡ ಏರ್ಪಡಿಸಲಾಗಿದೆ.

 

ಭಾನುವಾರ ಹಿನ್ನೆಲೆ ಸದ್ಯ MG ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂದಿನಂತೆ ಜನಸಾಮಾನ್ಯರ ಓಡಾಟ ಕಂಡುಬರುತ್ತಿದೆ. ಸಂಜೆ 6 ಗಂಟೆ ಬಳಿಕ ಜನಸ್ತೋಮ ಹೆಚ್ಚಾಗಲಿದೆ. ಈಗಾಗಲೇ ಜನಸಂದಣಿ ನಿಯಂತ್ರಣಕ್ಕೆ ಪೊಲೀಸರು ವ್ಯವಸ್ಥೆ ಮಾಡಿಕೊಂಡಿದ್ದು, ಬ್ರಿಗೇಡ್ ರಸ್ತೆಯಲ್ಲಿ ಜನರ ಓಡಾಟಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.

 

ಇದನ್ನೂ ಓದಿ: ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು

 

ಇನ್ನು ಕಲರ್ ಫುಲ್ ಆಗಿ ಬ್ರಿಗೇಡ್ ರೋಡ್ ಪಬ್‌ಗಳು ರೆಡಿಯಾಗುತ್ತಿದ್ದು, ಪಡ್ಡೆಹೈಕಳನ್ನು ಸೆಳೆಯಲು ವಿಶೇಷ ಆಫರ್ಸ್ ನೀಡಲಾಗಿದೆ. ಜತೆಗೆ ಅಂತಾರಾಷ್ಟ್ರಿಯ ಡಿಜೆಗಳನ್ನು ಆಹ್ವಾನಿಸಲಾಗಿದ್ದು, ಇದರಿಂದ ಈ ಬಾರಿ ಸಂಭ್ರಮಾಚರಣೆ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ

 

ಪೊಲೀಸ್‌ ಬಿಗಿ ಭದ್ರತೆ

ಬ್ರಿಗೇಡ್-ಎಂ.ಜಿ.ರಸ್ತೆಗಳ ವ್ಯಾಪ್ತಿಯಲ್ಲಿ 4 ಡಿಸಿಪಿಗಳು, 10 ಎಸಿಪಿಗಳು, 30 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಒಟ್ಟು 3 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 250 ಸಿಸಿಟಿವಿ ಕ್ಯಾಮೆರಾಗಳು ಹಾಗೂ 16 ವೀಕ್ಷಣಾ ಗೋಪುರಗಳ ಮೂಲಕ ಹದ್ದಿನ ಕಣ್ಣು, 18 ಮಹಿಳಾ ಸುರಕ್ಷತಾ ತಾಣ ಸ್ಥಾಪನೆ ಮಾಡಲಾಗಿದೆ.

ಮಹಿಳೆಯರ ಸುರಕ್ಷತೆಗಾಗಿ ಅಲ್ಲಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಾಣ, ರಸ್ತೆ ಜಂಕ್ಷನ್‌ಗಳಲ್ಲಿ ತಾತ್ಕಾಲಿಕ ಸಿಸಿಟಿವಿ ಅಳವಡಿಕೆ, ಮೊಬೈಲ್ ಕಮಾಂಡ್ ಸೆಂಟರ್ ಜೊತೆಗೆ ತಾತ್ಕಾಲಿಕ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಲಾಗಿದ್ದು, ಬ್ಯಾರಿಕೇಡ್ ಹಾಕಿ ವ್ಹೀಲಿಂಗ್, ರ‍್ಯಾಷ್ ಡ್ರೈವ್ ಮಾಡುವವರ ಮೇಲೂ ಪೊಲೀಸ್‌ ಕಣ್ಗಾವಲು ಇಡಲಾಗಿದೆ.

 

ಪೊಲೀಸರಿಂದಲೂ ಭದ್ರತೆಗೆ ಸಂಬಂಧಿಸಿದಂತೆ ಅಂತಿಮ‌ ಹಂತದ ಸಿದ್ಧತೆ ನಡೆಯುತ್ತಿದ್ದು, ಪಬ್‌ಗಳಿರುವ ರೋಡ್ಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ ಮಾಡಲಾಗಿದೆ. ರಾತ್ರಿ 8 ಗಂಟೆ ಬಳಿಕ ಎಂಜಿ ರಸ್ತೆ ಮಾರ್ಗವಾಗಿ ಸಂಚಾರ ಬಂದ್ ಆಗಲಿದ್ದು, ತುರ್ತು ವಾಹನ ಬಿಟ್ಟರೆ ಯಾವುದೇ ವಾಹನಕ್ಕೆ ಪ್ರವೇಶ ಇರುವುದಿಲ್ಲ.

 

Exit mobile version