Site icon PowerTV

ನನ್ನ ತಮ್ಮ ತಲೆಮರೆಸಿಕೊಳ್ಳುವ ಯಾವ ಕೆಲಸವನ್ನೂ ಮಾಡಿಲ್ಲ : ಪ್ರತಾಪ್ ಸಿಂಹ

ಬೆಂಗಳೂರು : ತಲೆಮರೆಸಿಕೊಳ್ಳುವ ಯಾವ ಕೆಲಸವನ್ನೂ ನನ್ನ ತಮ್ಮ ಮಾಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಹಾಸನದಲ್ಲಿ ಮರ ಕಡಿದ ಪ್ರಕರಣ ಆರೋಪದಡಿ ಬಂಧನವಾಗಿದ್ದ ಸಹೋದರ ವಿಕ್ರಂ ಸಿಂಹಗೆ ಜಾಮೀನು ಸಿಕ್ಕ ಬಳಿಕ ಮೊದಲ ಬಾರಿಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ತಲೆಮರೆಸಿಕೊಳ್ಳುವ ಯಾವ ಕೆಲಸವನ್ನೂ ನನ್ನ ತಮ್ಮ ಮಾಡಿಲ್ಲ. ಹಾಗೂ ತಲೆಮರೆಸಿಕೊಳ್ಳುವವರು ತಮ್ಮದೇ ಕಾರಿನಲ್ಲಿ ಫೋನ್ ಆನ್ ಮಾಡಿಕೊಂಡು ಬೆಂಗಳೂರಿಗೆ ಹೋಗುವುದಿಲ್ಲ. ಗೌರವಾನ್ವಿತ ನ್ಯಾಯಾಧೀಶರಿಗೆ ಧನ್ಯವಾದಗಳು. ಕರೆ, ಸಾಮಾಜಿಕ ಜಾಲತಾಣಗಳಲ್ಲಿ ಮೆಸೇಜ್ ಮೂಲಕ ಬೆನ್ನಿಗೆ ನಿಂತ ನಿಮ್ಮೆಲ್ಲರಿಗೂ ಮತ್ತು ಮಾಧ್ಯಮ ಮಿತ್ರರಿಗೂ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

ಮರಗಳ್ಳತನ ಪ್ರಕರಣದ ಆರೋಪಿ ವಿಕ್ರಂ ಸಿಂಹರನ್ನು ಬೇಲೂರು ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಕೀಲ ಚಂದ್ರೇಗೌಡ ಅವರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ನಾಯ್ಕ್ ಅವರು ಜಾಮೀನು ಮಂಜೂರು ಮಾಡಿದ್ದಾರೆ.

ಏನಿದು ಪ್ರಕರಣ?

ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 126ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಾಟ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ವಿಕ್ರಂ ಸಿಂಹರ ಹೆಸರು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಕ್ರಂ ಸಿಂಹರನ್ನು ವಶಕ್ಕೆ ಪಡೆದಿದ್ದರು.

Exit mobile version