Site icon PowerTV

ಅಲ್ಪಸಂಖ್ಯಾತರಷ್ಟೇ ಈ ರಾಜ್ಯದ ಪ್ರಜೆಗಳೇ? : ಸಿಎಂ ವಿರುದ್ಧ ಯತ್ನಾಕ್ ಕಿಡಿ

ವಿಜಯಪುರ : ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ 1,000 ಕೋಟಿ ಕ್ರಿಯಾ ಯೋಜನೆ ಸಿದ್ದಪಡಿಸಲು ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರಿಗೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂದು ಹೇಳಿದ್ದನ್ನು, ಇಂದು ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಅನುಷ್ಠಾನಗೊಳ್ಳಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಘೋಷವಾಕ್ಯಗಳು ನಿಮ್ಮ ಚುನಾವಣಾ ಪ್ರಚಾರಕ್ಕೆ, ಭಾಷಣಗಳಿಗೆ ಸೀಮಿತವಾಯಿತು ಅಷ್ಟೇ. ಅಲ್ಪಸಂಖ್ಯಾತರಷ್ಟೇ ಈ ರಾಜ್ಯದ ಪ್ರಜೆಗಳೇ? ಇದೇನಾ ನೀವು ನಂಬಿರುವ ಜಾತ್ಯಾತೀತತೆ? ಇದೇನಾ ನಿಮ್ಮ ಸರ್ಕಾರದ ಸಮಾನತೆ? ಬೇರೆ ಜಾತಿಯ ಪ್ರತಿಭಾನ್ವಿತ ಮಕ್ಕಳು, ವಿದ್ಯಾರ್ಥಿಗಳು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.

ಇದು ಸಂವಿಧಾನಕ್ಕೆ ಬಗೆದ ಅಪಚಾರ

ನಿಮ್ಮ ವೋಟ್ ಬ್ಯಾಂಕ್ ಅನ್ನು ಬಲಪಡಿಸಿಕೊಳ್ಳಲು ಈ ರೀತಿ ತುಷ್ಟೀಕರಣ ರಾಜಕೀಯ ಮಾಡುವುದು ಹೇಯ. ಇದು ಸಂವಿಧಾನಕ್ಕೆ ಬಗೆದ ಅಪಚಾರ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು. ತೆರಿಗೆದಾರರ ಹಣವನ್ನು ಯಾವುದೋ ಒಂದು ಸಮುದಾಯಕ್ಕೆ ಮೀಸಲು ಮಾಡುವುದು ನಿಮ್ಮ ಸ್ವಾರ್ಥ ಮನೋಭಾವವನ್ನು ತೋರಿಸುತ್ತದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Exit mobile version