Site icon PowerTV

‘ಮುಂಗಾರು ಮಳೆ’ ಚಿತ್ರಕ್ಕೆ 17 ವರ್ಷ! ಇಂದು ಕೂಡ ಮುಂಗಾರಿನಲ್ಲಿ ನೆಂದ ಭಾವನೆ ಎಂದ ಗಣಿ

ಬೆಂಗಳೂರು: ಒಂದೂವರೆ ದಶಕದ ಹಿಂದೆ ತೆರೆಕಂಡ ‘ಮುಂಗಾರು ಮಳೆ’ ಸಿನಿಮಾಗೆ ಇದೀಗ 17 ವರುಷದ ಹರ್ಷ.

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಹತ್ತಾರು ವಿಶೇಷತೆಗಳನ್ನು ಹೊಂದಿದ್ದ ಆ ಸಿನಿಮಾ ದೊಡ್ಡ ಮಟ್ಟದಲ್ಲೇ ಹಿಟ್‌ ಆಗಿತ್ತು.

ಈ ಕುರಿತು ಗೋಲ್ಡನ್​ ಸ್ಟಾರ್ ಗಣೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನ್ಮಾ ಕುರುತು ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

17 ವರ್ಷದ ಹಿಂದೆ ಸುರಿದ ಮುಂಗಾರು ಮಳೆಗೆ ಇಂದು ಕೂಡ ನೆಂದ ಭಾವನೆ .. ನಿಮ್ಮೆಲ್ಲರ ಪ್ರೀತಿ ಎಂದೂ ಹೀಗೆ ಇರಲಿ ಹಾಗೆ ಸುಮ್ಮನೆ ಎಂದು ಪೋಸ್ಟ್​ ಮಾಡಿದ್ದಾರೆ. 

ಅದು 2006ರ ಡಿ.29. ಗಣೇಶ್‌ ಅಭಿನಯದ ‘ಮುಂಗಾರು ಮಳೆ’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿತು. ಆ ದಿನ ಇಂಥದ್ದೊಂದು ದೊಡ್ಡ ಜಾದೂ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಯೋಗರಾಜ್‌ ಭಟ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಆ ಚಿತ್ರ ಸಂಪೂರ್ಣ ಹೊಸತನದಿಂದ ಕೂಡಿತ್ತು. ಹಾಗಾಗಿ ಪ್ರೇಕ್ಷಕರ ಮನಸೋತರು. ನೋಡನೋಡುತ್ತಿದ್ದಂತೆಯೇ ಎಲ್ಲೆಡೆ ಹೌಸ್‌ ಫುಲ್‌ ಬೋರ್ಡ್‌ ಕಾಣಿಸಲು ಆರಂಭವಾಯಿತು

ಪ್ರೇಕ್ಷಕರ ಮನಸೆಳೆದ ಹಾಡುಗಳು
ಮನೋಮೂರ್ತಿ ಅವರ ಸಂಗೀತ ಸಂಯೋಜನೆಯಲ್ಲಿ ‘ಮುಂಗಾರು ಮಳೆ’ ಚಿತ್ರದ ಹಾಡುಗಳು ಮೂಡಿಬಂದಿದ್ದವು. ಜಯಂತ ಕಾಯ್ಕಿಣಿ, ಕವಿರಾಜ್‌, ಹೃದಯಶಿವ, ಯೋಗರಾಜ್‌ ಭಟ್‌ ಬರೆದ ತಾಜಾ ಸಾಹಿತ್ಯಕ್ಕೆ ಸೋನು ನಿಗಮ್‌, ಶ್ರೇಯಾ ಘೋಷಾಲ್‌, ಹೇಮಂತ್‌ ಕುಮಾರ್‌, ಉದಿತ್‌ ನಾರಾಯಣ್‌, ಸುನಿಧಿ ಚವ್ಹಾಣ್‌, ಹೇಮಂತ್‌ ಕುಮಾರ್‌ ತಮ್ಮ ಮಧುರ ಕಂಠದಿಂದ ಜೀವ ತುಂಬಿದರು. ಅದರಲ್ಲೂ ‘ಅನಿಸುತಿದೆ ಯಾಕೋ ಇಂದು ಕೂಡ ಸೂಪರ್​ ಹಿಟ್‌ ಗೀತೆಯಾಗಿದೆ.

ಮತ್ತೇರಿಸಿದ ಮಸ್ತ್‌ ಡೈಲಾಗ್‌ಗಳು
ಇಡೀ ಸಿನಿಮಾದಲ್ಲಿ ಹೊಸ ಬಗೆಯ ಡೈಲಾಗ್‌ಗಳು ರಾರಾಜಿಸಿದ್ದವು. ಅದಕ್ಕೆ ಗಣೇಶ್‌ ಅವರು ತಮ್ಮದೇ ಶೈಲಿಯಲ್ಲಿ ಇನ್ನಷ್ಟು ಮೆರುಗು ನೀಡಿದ್ದರು. ಅದರಲ್ಲೂ ಪೂಜಾ ಗಾಂಧಿ ಮತ್ತು ಗಣೇಶ್‌ ನಡುವಿನ ಸಂಭಾಷಣೆಗಳು ಪ್ರೇಕ್ಷಕರಿಗೆ ಕಂಠಪಾಠ ಆಗುವ ಮಟ್ಟಕ್ಕೆ ಜನಪ್ರಿಯವಾಗಿದ್ದವು.

ಹೊಸ ಜೋಡಿ ಕಮಾಲ್ 
ಈ ಸಿನಿಮಾ ಮೂಲಕ ನಟಿ ಪೂಜಾ ಗಾಂಧಿ ಅವರು ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಅವರ ಮತ್ತು ಗಣೇಶ್‌ ಜೋಡಿಯು ಜನರಿಗೆ ಸಖತ್‌ ಇಷ್ಟವಾಯಿತು. ಇಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿ ಮೂಡಿಬಂದಿತ್ತು. ನಾಯಕಿ ಪಾತ್ರಕ್ಕೆ ನಿರ್ದೇಶಕರು ಕಥೆಯಲ್ಲಿ ಹೆಚ್ಚು ಮಹತ್ವ ನೀಡಿದ್ದರು. ಗಣೇಶ್‌ ಅವರ ಮ್ಯಾನರಿಸಂ ಕೂಡ ತುಂಬ ಫ್ರೆಶ್‌ ಆಗಿತ್ತು. ಆ ಸಿನಿಮಾದ ಯಶಸ್ಸಿನಿಂದಾಗಿ ಗಣೇಶ್‌ ಅವರು ಕರ್ನಾಟಕದಲ್ಲಿ ಸ್ಟಾರ್‌ ಆಗಿ ಹೊರಹೊಮ್ಮಿದರು. ಪೂಜಾ ಗಾಂಧಿಗೆ ಹಲವು ಸಿನಿಮಾ ಆಫರ್‌ಗಳು ಸಿಕ್ಕವು.

 

 

Exit mobile version