Site icon PowerTV

ರಾಜ ‘ವೀರ ಮದಕರಿ ನಾಯಕ’ ಚಿತ್ರ ನಿಲ್ಲಿಸುವಂತೆ ಹೇಳಿದ್ದು ನಾನೇ : ನಟ ದರ್ಶನ್

ಬೆಂಗಳೂರು : ರಾಜ ‘ವೀರ ಮದಕರಿ ನಾಯಕ’ ಸಿನಿಮಾ ಚಿತ್ರೀಕರಣ ನಿಲ್ಲಿಸುವಂತೆ ಹೇಳಿದ್ದು ನಾನೇ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ದರ್ಶನ್ ನೀಡಿರುವ ಕಾರಣ ಅವರ ಪ್ರಮಾಣಿಕತೆಗೆ ಸಾಕ್ಷಿಯಾಗಿದೆ.

ಕಾಟೇರ ಪ್ರಚಾರ ಕುರಿತು ನೀಡಿರುವ ವಿಶೇಷ ಸಂದರ್ಶನದಲ್ಲಿ ಡಿ ಬಾಸ್ ‘ರಾಜ ವೀರ ಮದಕರಿ ನಾಯಕ’ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವೀರ ಮದಕರಿ ನಾಯಕ ಒಂದು ಜನಾಂಗದ ದೇವರು. ಅವರಿಗೆ ಅಪಚಾರ ಮಾಡಬಾರದು. ಹಾಗಾಗಿ, ನಾನೇ ಸಿನಿಮಾ ನಿಲ್ಲಿಸುವಂತೆ ಹೇಳಿದೆ. ಈ ಸಿನಿಮಾ ಯಾಕೋ ಹಿಡಿತಕ್ಕೆ ಸಿಗಲಿಲ್ಲ. ಹತ್ತು ದಿನಗಳ ಕಾಲ ನಾವು ಶೂಟಿಂಗ್ ಕೂಡ ಮಾಡಿದ್ದೆವು. ಹೇಗೇಗೋ ಸಿನಿಮಾ ಮಾಡಿ ಬೈಯಿಸಿಕೊಳ್ಳೋಕ್ಕಿಂತ ಹಿಡಿತಕ್ಕೆ ಸಿಕ್ಕಾಗ ಮಾಡೋಣ ಅಂತ ಹೇಳಿದೆ ಎಂದು ದರ್ಶನ್ ತಿಳಿಸಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಾಟೇರ ಚಿತ್ರಕ್ಕೂ ಮೊದಲೇ ‘ರಾಜ ವೀರ ಮದಕರಿ ನಾಯಕ’ ತೆರೆ ಮೇಲೆ ಆರ್ಭಟಿಸಬೇಕಿತ್ತು. ಚಿತ್ರದುರ್ಗದಲ್ಲಿ ಮುಹೂರ್ತ ನೆರವೇರಿಸಿ, 10 ದಿನಗಳ ಕಾಲ ಶೂಟಿಂಗ್ ಕೂಡ ಮಾಡಲಾಗಿತ್ತು. ಡಿ ಬಾಸ್​ಗಾಗಿ ರಾಜೇಂದ್ರ ಸಿಂಗ್ ಬಾಬು ಕಥೆ ಸಿದ್ದಪಡಿಸಿ ನಿರ್ದೇಶನದ ಹೊಣೆ ಹೊತ್ತಿದ್ದರು. ಕಾಟೇರ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಆದರೆ, ದಿಢೀರನೆ ಚಿತ್ರ ನಿಂತಿತ್ತು. ಇದು ದಾಸನ ಭಕ್ತಗಣಕ್ಕೂ ನಿರಾಸೆ ಉಂಟುಮಾಡಿತ್ತು.

ಮದಕರಿ ಶೂಟಿಂಗ್ ಯಾವಾಗ?

ರಾಜ ವೀರ ಮದಕರಿ ನಾಯಕ ಚಿತ್ರ ಹಲವು ಕಾರಣಗಳಿಂದಾಗಿ ಸದ್ದು, ಸುದ್ದಿ ಮಾಡಿತ್ತು. 4 ವರ್ಷಗಳ ಹಿಂದೆ ವಿವಾದಕ್ಕೂ ಕಾರಣವಾಗಿತ್ತು. ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಈ ಚಿತ್ರವನ್ನು ಕಿಚ್ಚ ಸುದೀಪ್ ಮಾಡಬೇಕು ಎಂದಿದ್ದರು. ಆದರೆ, ದರ್ಶನ್ ಅವರ ಹೆಸರು ಫೈನಲ್ ಆಗಿತ್ತು. ರಾಜಮಾತೆಯಾಗಿಒ ಸುಮಲತಾ ಅಂಬರೀಶ್ ನಟಿಸುವುದು ಕನ್ಫರ್ಮ್ ಆಗಿತ್ತು. ಇದೀಗ, ಕಾಟೇರ ಚಿತ್ರ ರಿಲೀಸ್​ಗೆ ಸಜ್ಜಾಗಿದ್ದು, ಬಳಿಕ ಡಿ ಬಾಸ್ ಮಿಲನ ಪ್ರಕಾಶ್ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಇದಾದ ಬಳಿಕ ಜೋಗಿ ಪ್ರೇಮ್ ಹಾಗೂ ದರ್ಶನ್ ಕಾಂಬೋನ ಸಿನಿಮಾ ಇದೆ. ಇವೆರಡು ಕಂಪ್ಲೀಟ್ ಆದ ಬಳಿಕವೇ ದರ್ಶನ್ ಹಾಗೂ ರಾಕ್​ಲೈನ್ ಈ ಚಿತ್ರಕ್ಕೆ ಮತ್ತೆ ಜೀವ ನೀಡಲಿದ್ದಾರೆ ಎನ್ನಲಾಗಿದೆ.

Exit mobile version