ಹಾವೇರಿ: ಮಕ್ಕಳನ್ನು ಬದುಕಿಸಲು ಸತತ 6 ಗಂಟೆಗಳ ಕಾಲ ಉಪ್ಪಿನ ರಾಶಿಯಲ್ಲಿ ಮುಚ್ಚಿಟಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ.
ಹೌದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋ ನೋಡಿ ಮೃತ ಮಕ್ಕಳನ್ನು ಬದುಕಿಸಲು ಹೆಣಗಾಟವಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಮೃತ ಮಕ್ಕಳನ್ನು ಹೇಮಂತ್ (12) ಹಾಗೂ ನಾಗರಾಜ್ (11) ಎಂದು ಗುರುತಿಸಲಾಗಿದೆ.
ಮೃತ ಮಕ್ಕಳ ಪೋಷಕರು ಉಪ್ಪಿನ ರಾಶಿಯಲ್ಲಿ ಅವರ ಮೃತದೇಹ (Dead Body) ಮುಚ್ಚಿಟ್ಟು ಬದುಕಿಸಲು ಹೋರಾಟ ನಡೆಸಿದ್ದರು. ಸತತ 6 ಗಂಟೆಗಳ ಕಾಲ ಉಪ್ಪಿನ ಗುಡ್ಡೆಯಲ್ಲಿ ಮೃತದೇಹ ಇಟ್ಟು ಬದುಕಿಸುವ ಪ್ರಯತ್ನ ಮಾಡಿದ್ದರು.
ಮೃತದೇಹ ಪತ್ತೆಯಾಗುತ್ತಿದ್ದಂತೆ ಮನೆಗೆ ತಂದು ಉಪ್ಪುರಾಶಿಯನ್ನು ಹಾಕಿ ಪೋಷಕರು ಬದುಕಿಸಲು ಹೆಣಗಾಟ ಮಾಡಿದ್ದಾರೆ. ಇತ್ತೀಚಿಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಸುಳ್ಳು ವೈರಲ್ ವಿಡಿಯೋ ನೋಡಿ ಪೋಷಕರು ಹೀಗೆ ಮಾಡಿದ್ದರು. ಕಾಗಿನೆಲೆಯ ಪೊಲೀಸರು ಪೋಷಕರ ಮನವೊಲಿಸಿದ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಾಗಿನಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು