Site icon PowerTV

ದಾವೂದ್‌ ಇಬ್ರಾಹಿಂಗೆ ವಿಷಪ್ರಾಶನ? ಆಸ್ಪತ್ರೆಗೆ ದಾಖಲು

ದೆಹಲಿ: ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದಿದೆ.

ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿದೆ. ಈತ ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಭಾರತ ಹಾಗೂ ಪಾಕಿಸ್ತಾನದ ತನಿಖಾ ಅಧಿಕಾರಿಗಳು ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಖಚಿತಪಡಿಸಿಲ್ಲ. ಹಠಾತ್ ಆರೋಗ್ಯ ಹದಗೆಡಲು ವಿಷವೇ ಕಾರಣ ಎಂಬ ಊಹಾಪೋಹಗಳು ದಟ್ಟವಾಗಿದ್ದು, ಕರಾಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತ ಮತ್ತು ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ದಾವೂದ್ ಇಬ್ರಾಹಿಂ ತಲೆಗೆ ಎನ್‌ಐಎ 25 ಲಕ್ಷ ಬಹುಮಾನವನ್ನೂ ಘೋಷಿಸಿದೆ. ಭಾರತಕ್ಕೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಅಗ್ರಸ್ಥಾನದಲ್ಲಿದ್ದಾನೆ.

 

Exit mobile version