Site icon PowerTV

ದುಡ್ಡು ಲೆಕ್ಕ ಹಾಕಿದ ಅಧಿಕಾರಿಗಳು ಸುಸ್ತೋ.. ಸುಸ್ತು..!

ನವದೆಹಲಿ : ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ಧೀರಜ್‌ ಪ್ರಸಾದ್‌ ಸಾಹು ಮನೆ ಮೇಲೆ ದಾಳಿ ನಡೆಸಿದ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಬಿಜೆಪಿ ನಾಯಕರು, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರನ್ನು ಟಾರ್ಗೆಟ್ ಮಾಡಿ ಉತ್ತರಿಸುವಂತೆ ಎಕ್ಸ್ ಮೂಲಕ ಒತ್ತಾಯಿಸಿದ್ದಾರೆ.

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಧೀರಜ್ ಸಾಹುವಿನ ನಾನಾ ಮನೆಗಳಲ್ಲಿ ಮತ್ತು ಆತನಿಗೆ ಸಂಬಂಧಿಸಿದ ವ್ಯಕ್ತಿಗಳ ಮನೆಯಲ್ಲಿ ಪತ್ತೆಯಾದ ಒಟ್ಟು ಮೂನ್ನೂರು ಕೋಟಿಗೂ ಅಧಿಕ ಹಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳ ಪ್ರಕಾರ, ಒಂದು ನಿರ್ದಿಷ್ಟ ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಿರುವ ಅತ್ಯಧಿಕ ಮೊತ್ತದ ಕಪ್ಪುಹಣ ಇದಾಗಿದ್ದು, ಭುವನೇಶ್ವರದ ಬೌದ್‌ ಡಿಸ್ಟಿಲರಿ ಪ್ರೈವೇಟ್‌ ಲಿಮಿಟೆಡ್‌ನ ವಿವಿಧ ಕಚೇರಿ ಮೇಲೆ ಡಿಸೆಂಬರ್ ಆರರಂದು ದಾಳಿ ನಡೆಸಲಾಗಿತ್ತು.

ಸಂಸದ ಧೀರಜ್ ಸಾಹುವಿಗೆ ಸಂಬಂಧಿಸಿದ ಹಣ ಎಣಿಕೆ ಕಾರ್ಯ ಇಂದೂ ಕೂಡ ಮುಂದುವರೆದಿದೆ. ಆರಂಭದಲ್ಲಿ ಇನ್ನೂರು ಕೋಟಿ ಅಂತಾ ಅಂದಾಜು ಮಾಡಲಾಗಿತ್ತು. ದಾಖಲೆ ಜೊತೆಗೆ ಮತ್ತಷ್ಟು ಕಾರ್ಯಚರಣೆ ಮುಂದುವರಿಸಿದಾಗ ವಶಪಡಿಸಿಕೊಂಡ ಮೊತ್ತ ಮುನ್ನೂರು ಕೋಟಿಗೂ ಅಧಿಕಾವಾಗಿದೆ ಎಂದು ಹೇಳಲಾಗಿದೆ.

ಬರೋಬ್ಬರಿ 190 ಚೀಲದಲ್ಲಿ ಹಣ

ವಶ ಪಡಿಸಿಕೊಂಡ ಹಣದ ಎಣಿಕೆ ಕಾರ್ಯಕ್ಕಾಗಿ ನಲವತ್ತು ದೊಡ್ಡ ಮತ್ತು ಸಣ್ಣ ಗಾತ್ರದ ಎಣಿಕೆ ಯಂತ್ರಗಳ ನೆರವು ಪಡೆದಿದ್ದು, ಐಟಿ ಇಲಾಖೆ ಮತ್ತು ಬ್ಯಾಂಕ್‌ ಅಧಿಕಾರಿಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಪ್ತಿಯಾದ ಹಣವನ್ನು ಬೊಲಾಂಗಿರ್‌ನಲ್ಲಿರುವ ಎಸ್‌ಬಿಐನ ಕೇಂದ್ರ ಶಾಖೆಗೆ ಜಮೆ ಮಾಡಲು ಸುಮಾರು 190 ಚೀಲದಲ್ಲಿ ಹಣವನ್ನು ಕೊಂಡೊಯ್ಯಲಾಗಿದೆ.

ಕೈಕೊಡುತ್ತಿವೆ ಹಣ ಎಣಿಕೆ ಯಂತ್ರಗಳು

ಐಟಿ ದಾಳಿಯಲ್ಲಿ ಒಟ್ಟು 150 ಅಧಿಕಾರಿಗಳು ದಾಳಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ವಶಪಡಿಸಿಕೊಂಡಿರುವ ಡಿಜಿಟಲ್‌ ದಾಖಲೆಗಳ ಪರಿಶೀಲನೆಗಾಗಿ ಇಲಾಖೆಯು ಹೈದರಾಬಾದ್‌ನಿಂದ ಹೆಚ್ಚುವರಿಯಾಗಿ 20 ಅಧಿಕಾರಿಗಳನ್ನು ಕರೆಯಿಸಿಕೊಂಡಿದೆ. ಕಾರ್ಯದೊತ್ತಡದ ಪರಿಣಾಮ ಎಣಿಕೆ ಯಂತ್ರಗಳು ಕೈಕೊಡುತ್ತಿವೆ. ಹೀಗಾಗಿ, ಹಣ ಲೆಕ್ಕ ಹಾಕುವ ಕಾರ್ಯ ವಿಳಂಬವಾಗಿದೆ. ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಇತರೆ ಬ್ಯಾಂಕ್‌ಗಳಿಂದಲೂ ಹಣ ಎಣಿಕೆ ಯಂತ್ರಗಳನ್ನು ಪಡೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಬೌದ್‌ ಡಿಸ್ಟಿಲರಿ ಕಂಪನಿ ಕಚೇರಿ ಮೇಲೆ ದಾಳಿ

ಮದ್ಯ ವಿತರಕರು, ಮಾರಾಟಗಾರರು, ಉದ್ಯಮ ಸಂಸ್ಥೆಗಳು ಪಾವತಿಸಿರುವ ದಾಖಲೆಯಿಲ್ಲದ ದೊಡ್ಡ ಮೊತ್ತದ ನಗದನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು. ಡಿಸೆಂಬರ್ 6ರಂದು ಬೌದ್‌ ಡಿಸ್ಟಿಲರಿ ಕಂಪನಿ ಕಚೇರಿ ಮೇಲೆ ದಾಳಿ ನಡೆದಿತ್ತು. ಇದು, ಬಲ್‌ದೇವ್‌ ಸಾಹು ಇನ್ಫ್ರಾ ಪ್ರೈವೇಟ್‌ ಲಿಮಿಟೆಡ್‌ನ ಅಧೀನ ಸಂಸ್ಥೆಯಾಗಿದೆ. ಇದು, ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದರೊಬ್ಬರಿಗೂ ಸೇರಿದೆ ಎನ್ನಲಾಗಿದೆ. ಸಂಬಲ್‌ಪುರ್‌, ರೂರ್ಕೆಲಾ, ಬೊಲಾಂಗಿರ್, ಸುಂದರ್‌ಗರ್ ಮತ್ತು ಭುವನೇಶ್ವರದ ವಿವಿಧೆಡೆ ದಾಳಿ ನಡೆಸಲಾಗಿತ್ತು.

Exit mobile version