Site icon PowerTV

ಯತ್ನಾಳ್ ಆರೋಪದ ಹಿಂದಿನ ಗುರಿ ಮೋದಿ ಎಂಬುದು ಬಯಲು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯತ್ನಾಳ್ ಆರೋಪದ ಹಿಂದಿನ ಗುರಿ ಮೋದಿ ಎಂಬುದು ಬಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಹಾಕಿ ಕಿಡಿಕಾರಿದ್ಧಾರೆ.

ಮೌಲ್ವಿ ತನ್ವೀರ್ ಹಾಶ್ಮಿ ಅವರ ಜೊತೆಗಿನ ನನ್ನ ಫೋಟೊವನ್ನು ಹಿಡ್ಕೊಂಡು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ನನ್ನ ವಿರುದ್ದ ಆರೋಪ ಮಾಡಿದರೂ, ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, “ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಫೋಟೊಗಳೇ ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ವ್ಯವಹಾರದಲ್ಲಿ ನಾನು ಪಾಲುದಾರನಲ್ಲ: ಯತ್ನಾಳ್

“ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಹೋಗಿರುವುದರಿಂದ ಯತ್ನಾಳ್ ಅವರು ಕೆರಳಿ ಕೆಂಡವಾಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ನನ್ನ ಫೋಟೋವನ್ನು ತೋರಿಸಿ ಆರೋಪ ಮಾಡಿದ್ದಾರೆ” ಎಂದಿದ್ದಾರೆ.

 

Exit mobile version