Site icon PowerTV

ಪ್ರತಿ ಸ್ವಸಹಾಯ ಸಂಘಕ್ಕೆ 1 ಲಕ್ಷ ರೂ. ನೆರವು : ಸಿದ್ದರಾಮಯ್ಯ

ಬೆಳಗಾವಿ : ಪ್ರತಿ ಸ್ವಸಹಾಯ ಸಂಘಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂ.ಗಳ ನೆರವು ನೀಡುತ್ತದೆ. 131 ಕೋಟಿ ರೂ.ಗಳನ್ನು ವ್ಯಯ ಮಾಡಿ 12,600 ಗುಂಪುಗಳಿಗೆ ಈ ವರ್ಷ ಸಹಾಯ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಸ್ವಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಮಹಿಳೆಯರನ್ನು ಸಬಲರನ್ನಾಗಿ ಮಾಡಲು ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ ಎಂದರು.

ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣವನ್ನು ನೀಡಲಾಗಿದೆ. ಮಹಿಳೆಯರು ಮನೆಗಳಿಗೆ ಸೀಮಿತವಾಗದೆ ರಾಜ್ಯದ ಮೂಲೆ ಮೂಲೆಗಳಿಗೂ ಹೋಗಬೇಕು. 100 ಕೋಟಿಗೂ ಹೆಚ್ಚು ಬಾರಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಓಡಾಡಿದ್ದಾರೆ. ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಬಸ್ಸುಗಳಲ್ಲಿ ಓಡಾಡಿದ್ದಾರೆ ಎಂದು ತಿಳಿಸಿದರು.

1.14 ಲಕ್ಷ ಮಹಿಳೆಯರಿಗೆ 2,000 ರೂ.

ಗೃಹಲಕ್ಷ್ಮಿ ಯೋಜನೆಯಡಿ 2,000 ರೂ.ಗಳನ್ನು ಪಡೆಯಲು ಈವರೆಗೆ 1.17 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. 1.14 ಲಕ್ಷ ಮಹಿಳೆಯರಿಗೆ 2,000 ರೂ.ಗಳನ್ನು ನೀಡಲಾಗುತ್ತಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 170 ರೂ.ಗಳನ್ನು ಪ್ರತಿಯೊಬ್ಬರಿಗೂ ಅಕ್ಕಿಗೆ ಬದಲಾಗಿ ಕೊಡುತ್ತಿದ್ದೇವೆ. ಯುವನಿಧಿ ಯೋಜನೆಯ ಪ್ರಕ್ರಿಯೆ ನಡೆಯುತ್ತಿದ್ದು ಜನವರಿಯಲ್ಲಿ ಕೊಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

Exit mobile version