Site icon PowerTV

ಪತ್ನಿಯ ಬರ್ತ್‌ಡೇ, ಪತಿಗೆ ಡೆತ್‌ಡೇ : ದುಬೈಗೆ ಕರೆದೊಯ್ಯದ್ದಕ್ಕೆ ಗಂಡನ ಪ್ರಾಣ ತೆಗೆದ ಹೆಂಡತಿ

ಪುಣೆ: ಬರ್ತ್‌ಡೇ ಆಚರಣೆಗೆ ದುಬೈಗೆ ಕರೆದುಕೊಂಡು ಹೋಗಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪತ್ನಿಯೊಬ್ಬಳು ಪತಿಯ ಮೂಗಿಗೆ ಗುದ್ದಿ ಆತನ ಪ್ರಾಣವನ್ನೇ ತೆಗೆದಿರುವ ಘಟನೆ ಪುಣೆಯ ವನವಡಿ ಪ್ರದೇಶದಲ್ಲಿ ನಡೆದಿದೆ.

ನಿರ್ಮಾಣ ಉದ್ಯಮದಲ್ಲಿ ಉದ್ಯಮಿಯಾಗಿರುವ ನಿಖಿಲ್ ಖನ್ನಾ (36) ಹಾಗೂ ರೇಣುಕಾ ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರೇಣುಕಾಳ 38ನೇ ವರ್ಷದ ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಕರೆದೊಯ್ಯಲು ನಿಖಿಲ್‌ ನಿರಾಕರಿಸಿದ್ದೇ ಅನಾಹುತಕ್ಕೆ ಕಾರಣವಾಯಿತು.

 ಘಟನೆ ನಡೆದಿದ್ದು ಹೇಗೆ..? 

ಶುಕ್ರವಾರ ಮನೆಯಲ್ಲಿ ಇಬ್ಬರಿಗೂ ಈ ಬಗೆಗೆ ವಿವಾದ ಆರಂಭವಾಯಿತು. ಬರ್ತ್‌ಡೇ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲ ಹಾಗೂ ದುಬಾರಿ ಉಡುಗೊರೆಗಳನ್ನು ನೀಡಲಿಲ್ಲ ಎಂದು ರೇಣುಕಾ ಆಕ್ಷೇಪಿಸಿದಳು. ತನ್ನ ಕೆಲವು ಸಂಬಂಧಿಕರ ಹುಟ್ಟುಹಬ್ಬವನ್ನು ಆಚರಿಸಲು ದೆಹಲಿಗೆ ಹೋಗಬೇಕೆಂಬ ತನ್ನ ಆಸೆಗೂ ನಿಖಿಲ್‌ ಅನುಕೂಲಕರ ಪ್ರತಿಕ್ರಿಯೆ ನೀಡದೆ ತಣ್ಣೀರು ಎರಚಿದ್ದು ಆಕೆಗೆ ಇನ್ನಷ್ಟು ಕೋಪ ಉಂಟುಮಾಡಿತ್ತು. ವಿವಾದ ತಾರಕಕ್ಕೇರಿ, ಇಬ್ಬರೂ ಜೋರು ಧ್ವನಿಯಲ್ಲಿ ಚೀರಾಡಿಕೊಂಡರು.

ಇದನ್ನೂ ಓದಿ: ಕಂಬಳ ನೋಡಿ ವಾಪಸಾಗುವಾಗ ಕಾರು-ಲಾರಿ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು

ಜಗಳದ ವೇಳೆ ರೇಣುಕಾ ಕೋಪದ ಭರದಲ್ಲಿ ನಿಖಿಲ್ ಮುಖಕ್ಕೆ ಹೊಡೆದಿದ್ದಾಳೆ. ಗುದ್ದಿದ ಪರಿಣಾಮವು ತುಂಬಾ ಜೋರಾಗಿದ್ದುದರಿಂದ ನಿಖಿಲ್‌ನ ಮೂಗು ಮುರಿದು ಕೆಲವು ಹಲ್ಲುಗಳು ತುಂಡಾದವು. ತೀವ್ರ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡ. ಮೂಗು ಮುರಿದುದರಿಂದ ಉಸಿರುಗಟ್ಟಿದೆ. ಚಿಕಿತ್ಸೆಗೆ ಕರೆದೊಯ್ದರೂ ನಿಖಿಲ್‌ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ರೇಣುಕಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಿದ್ದಾರೆ.

 

Exit mobile version