Site icon PowerTV

ಡಿ.ಕೆ. ಶಿವಕುಮಾರ್ ಯಾಕೆ ಹೆದರಿಕೊಳ್ಳುತ್ತಿದ್ದೀರಿ? ಯಾಕೆ ಓಡಿ ಹೋಗುತ್ತಿದ್ದೀರಿ? : ಅಶ್ವತ್ಥನಾರಾಯಣ

ಕಲಬುರಗಿ : ಡಿ.ಕೆ. ಶಿವಕುಮಾರ್ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎನ್ನುವುದು ಕೇಸಾಗಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಎಲ್ಲಿಂದ ಗಳಿಕೆಯಾಗಿದೆ? ಎಲ್ಲಿಂದ ಬಂತು? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ಉತ್ತರ ಕೊಡಬೇಕು. ಯಾಕೆ ಹೆದರಿಕೊಳ್ಳುತ್ತಿದ್ದೀರಿ? ಯಾಕೆ ಓಡಿ ಹೋಗುತ್ತಿದ್ದೀರಿ? ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಕುಟುಕಿದರು.  

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಅನ್ನೋ ರೀತಿಯಲ್ಲಿ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡುತ್ತಿದ್ದೀರಿ. ಇದು ಸರಿಯಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೀ ಭ್ರಷ್ಟಾಚಾರದಲ್ಲೇ ತೊಡಗಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆಯಲು ಮುಂದಾಗಿದೆ. ನಮ್ಮ ಸರ್ಕಾರ ಸಿಬಿಐಗೆ ವಹಿಸಿರುವುದರಲ್ಲಿ ಯಾವುದೇ ರೀತಿ ಕಾನೂನು ಉಲ್ಲಂಘನೆ ಆಗಿಲ್ಲ. ಹಾಗೇನಾದರೂ ಆಗಿದ್ದರೆ ನ್ಯಾಯಾಲಯದಲ್ಲಿ ಇವರು ವಾದ ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವಂತೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ

ಈ ವಿಚಾರದಲ್ಲಿ ತಪ್ಪು ಆಗಿದ್ದರೆ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಬೇಕಿತ್ತು. ಏಕೆ ನ್ಯಾಯಾಲಯಕ್ಕೆ ಹೋಗಿಲ್ಲ? ನಾವು ಅಧಿಕಾರದಲ್ಲಿದ್ದಾಗ ಎಲ್ಲವೂ ಕಾನೂನು ಪ್ರಕಾರವಾಗಿ ಕೆಲಸ ಮಾಡಿದ್ದೇವೆ. ನಾವು ಕಾನೂನು ಉಲ್ಲಂಘನೆ ಮಾಡಿದ್ದರೆ ನ್ಯಾಯಾಲಯ ಅದನ್ನು ಐದೇ ನಿಮಿಷದಲ್ಲಿ ತಿರಸ್ಕಾರ ಮಾಡುತ್ತಿತ್ತು. ಈ ಹಿಂದೆಯೂ ಹಲವು ಸಿಬಿಐ ಪ್ರಕಣಗಳನ್ನು ಬೇರೆ ಬೇರೆ ಸರ್ಕಾರಗಳು ಹಿಂದೆ ಪಡೆಯಲು ಪ್ರಯತ್ನಿಸಿ ವಿಫಲವಾಗಿವೆ. ಹಾಗಾಗಿ ಈ ವಿಚಾರದಲ್ಲೂ ಸಿಬಿಐ ತನಿಖೆಯೇ ಮುಂದುವರಿಯುತ್ತೆ. ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಅಶ್ವತ್ಥನಾರಾಯಣ ಹೇಳಿದರು.

Exit mobile version