ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ದೀಪಾವಳಿಯನ್ನು ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿ ಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ.
ದೀಪಾವಳಿಯ ದಿನದಂದು ಪ್ರಜೆಗಳನ್ನು ನೋಡಲು ಬಲೀಂದ್ರ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯಿಂದ ಜನರು ಅಭ್ಯಂಜನ ಸ್ನಾನಾದಿಗಳನ್ನು ಮಾಡಿಕೊಂಡು ಮನೆಯ ಎಲ್ಲ ಪಾತ್ರೆಗಳಲ್ಲಿ ಶುದ್ಧವಾದ ನೀರನ್ನು ತುಂಬಿಸುತ್ತಾರೆ.
ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳನ್ನು ಹೇಳುವ ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಶ್ಛ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೇತೇಃ ಚಿರಂಜೀವಿನಃ | ಶ್ಲೋಕವನ್ನು ಹೇಳುತ್ತಾರೆ.
ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮನನ್ನು ಸ್ತುತಿಸಿದರೆ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.