Site icon PowerTV

ವೀರ ಯೋಧರೊಂದಿಗೆ ಮೋದಿ ದೀಪಾವಳಿ : ಸತತ 10ನೇ ವರ್ಷ ದಾಖಲೆ ಬರೆದ ನರೇಂದ್ರ

ನವದೆಹಲಿ : ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಬೆಳಗಿನ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದ ದೀಪಾವಳಿ ಹಬ್ಬವನ್ನು ದೇಶದ ಗಡಿ ಕಾಯುವ ವೀರ ಯೋಧರ ಜೊತೆ ಹಬ್ಬ ಆಚರಿಸುವ ನರೇಂದ್ರ ಪ್ರಧಾನಿ ಮೋದಿ, ಈ ಬಾರಿ ಕೂಡ ತಮ್ಮ ವೈಯಕ್ತಿಕ ಸಂಪ್ರದಾಯ ಮುಂದುವರೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸತತ 10ನೇ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಈ ಮೂಲಕ ಪ್ರಧಾನಿ ಅವರು ದೇಶರಕ್ಷಕರಿಗೆ ನಮನ ಸಲ್ಲಿಸಿದರು. ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಪ್ರಧಾನಿ ಮೋದಿ, ಭಾರತೀಯ ಸೇನಾ ಯೋಧರ ಜೊತೆ ಈ ಬಾರಿಯ ದೀಪಾವಳಿ ಹಬ್ಬ ಆಚರಿಸಿದ್ದಾರೆ.

ಕಳೆದ ಬಾರಿ ಭಾರತ ಮತ್ತು ಪಾಕಿಸ್ತಾನ ಗಡಿಯ ಕಾರ್ಗಿಲ್‌ನಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡಿದ್ದ ಪ್ರಧಾನಿ ಮೋದಿ, 2023ರಲ್ಲಿ ಭಾರತ ಮತ್ತು ಚೀನಾ ಗಡಿಯ ಹಿಮಾಚಲ ಪ್ರದೇಶದ ಲೆಪ್ಚಾವನ್ನು ಆಯ್ಕೆ ಮಾಡು ಮೂಲಕ ದೇಶದ ಗಮನ ಸೆಳೆದಿದ್ದಾರೆ. ಭಾನುವಾರ ಬೆಳಗ್ಗೆಯೇ ಹಿಮಾಚಲ ಪ್ರದೇಶದ ಲೆಪ್ಚಾ ತಲುಪಿದ ಪ್ರಧಾನಿ ಮೋದಿ, ಗಡಿ ಭಾಗದ ಸೈನಿಕರಿಗೆ ಸಿಹಿ ಹಂಚಿ, ಉಡುಗೊರೆಗಳನ್ನು ನೀಡುವ ಮೂಲಕ ಹಬ್ಬ ಆಚರಿಸಿ, ಬಳಿಕ ಸೈನಿಕರ ಜೊತೆ ಸಂವಾದ ನಡೆಸಿದರು.

2014ರಲ್ಲಿ ಮೊದಲ ಬಾರಿ ಪ್ರಧಾನಿಯಾಗಿ ಆಯ್ಕೆಯಾದಾಗ ಸಿಯಾಚಿನ್‌ನಲ್ಲಿ ಸೇನಾ ಸಿಬ್ಬಂದಿ ಜತೆಗೆ ದೀಪಾವಳಿ ಆಚರಿಸುವ ಪರಿಪಾಠ ಬೆಳೆಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಖುಷಿಯಿಂದಲೇ ಹಿಮಾಚಲ ಪ್ರದೇಶದ ಲೆಪ್ಷಾ ಶಿಬಿರದಲ್ಲಿ ಯೋಧರ ಜೊತೆ ಬೆಳಕಿನ ಹಬ್ಬ ಆಚರಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೊತೆಗೆ, ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುವುದು ಉತ್ತಮ ಭಾವನೆಯಾಗಿದ್ದು, ಹೆಮ್ಮೆಯ ಅನುಭವವಾಗಿದೆ ಎಂದರು.

ಯೋಧರೊಂದಿಗೆ ಪ್ರಧಾನಿ ಮೋದಿ ಸಂವಾದ

ಇದೇ ವೇಳೆ ಯೋಧರ ಜೊತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಜಗತ್ತಿನ ಹಲವು ದೇಶಗಳ ನಿರೀಕ್ಷೆ ಭಾರತದ ಮೇಲೆ ಇರುವಾಗ ನಮ್ಮ ಗಡಿಯನ್ನು ಭದ್ರಪಡಿಸಿಕೊಳ್ಳುವುದು ನಮ್ಮ ಕರ್ತವ್ಯ, ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುವ ಮೂಲಕ ಭದ್ರತಾ ಪಡೆಗಳ ಧೈರ್ಯ ಮತ್ತು ಸಾಹಸವನ್ನು ಶ್ಲಾಘಿಸಿದರು. ಸೈನಿಕರು ತಮ್ಮ ಕುಟುಂಬಗಳಿಂದ ದೂರವಿದ್ದು, ದೇಶದ ರಕ್ಷಣೆಗೆ ಕಾವಲುಗಾರರಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಬೆಳಗಿಸುತ್ತಾರೆ. ಅವರ ತ್ಯಾಗ ಮತ್ತು ಸಮರ್ಪಣೆ ದೇಶದ ಜನತೆಯನ್ನು ಸುರಕ್ಷಿತವಾಗಿರಿಸುತ್ತದೆ. ಈ ವೀರರಿಗೆ ದೇಶವು ಯಾವಾಗಲೂ ಕೃತಜ್ಞರಾಗಿರಬೇಕು ಎಂದು ತಿಳಿಸಿದರು.

ಒಟ್ಟಾರೆ, ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಸತತ 10ನೇ ವರ್ಷ ಯೋಧರೊಂದಿಗೆ ದೀಪಾವಳಿ ಆಚರಿಸುವ ಮೂಲಕ ದೇಶರಕ್ಷಕರಿಗೆ ವಿಶೇಷ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಗಡಿಯಲ್ಲಿ ಯೋಧರನ್ನು ಸತ್ಕರಿಸುವ ಮೂಲಕ ಕುತಂತ್ರಿ ಚೀನಾ ಹಾಗೂ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ.

Exit mobile version