ಹುಬ್ಬಳ್ಳಿ : ಇಷ್ಟು ದಿನದಿಂದ ಆಗದಿದ್ದದ್ದು ಇವಾಗ ಹೇಗೆ ಬಿಜೆಪಿ ರಾಜ್ಯಾಧ್ಯಕ್ಷr ಆಯ್ಕೆ ಆಯ್ತು? ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನೋ ಅತ್ತು ಕರೆದು ಬಿ.ವೈ.ವಿಜಯೇಂದ್ರನ್ನ ರಾಜ್ಯಾಧ್ಯಕ್ಷರಾಗಿ ಮಾಡಿರೋ ತರಹ ಕಾಣುತ್ತೆ ಎಂದು ಕುಟುಕಿದ್ದಾರೆ.
ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ, ಈಗ್ಯಾಕೆ ಮಾಡಿದ್ರು? ಇನ್ನೂ ರಾಜಕೀಯ ಪಕ್ಷವಾಗಿ ತಕ್ಷಣವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಆದರೆ, ಈ ವಿಚಾರದಲ್ಲಿ ಬಿಜೆಪಿ ಫೇಲ್ ಆಗಿದೆ. ಈಗಾಗಲೇ ಬೇರೆ ಕಡೆ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿರುವ ಬಿಜೆಪಿಗರು ಸಾಕಷ್ಟು ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ವಿಜಯೇಂದ್ರ ತವರೂರಲ್ಲಿ ಸಂಭ್ರಮ
ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಹಿನ್ನೆಲೆ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಂಭ್ರಮ ಮನೆ ಮಾಡಿದೆ. ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ನೂರಾರು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಿರುವುದನ್ನು ಸ್ವಾಗತಿಸಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ಪರ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆ ಕೂಗಿದರು. ಇನ್ನೂ ಸಂಭ್ರಮಾಚರಣೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ, ಡಿ.ಎಸ್. ಅರುಣ್, ರುದ್ರೆಗೌಡ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.


