Site icon PowerTV

ಆರೋಗ್ಯ ಸರಿಹೋದ ಕೂಡಲೇ ಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆ : ಶಾಸಕ ಯತ್ನಾಳ್ ಭವಿಷ್ಯ

ಚಾಮರಾಜನಗರ : ರಾಜ್ಯ ಕಾಂಗ್ರೆಸ್​ ಸರ್ಕಾರ ದಿವಾಳಿಯಾಗುವುದು ಖಚಿತ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೆ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ ಎಂದು ಕುಟುಕಿದ್ದಾರೆ.

ಹೈ ಬಿಪಿ, ಹೈ ಶುಗರ್ ಕಾರಣದಿಂದ ಡಿ.ಕೆ ಶಿವಕುಮಾರ್ ಜಾಮೀನು ಪಡೆದು ಹೊರಗಿದ್ದಾರೆ. ಆರೋಗ್ಯ ಸರಿಹೋದ ಬಳಿಕ ಮತ್ತೆ ತಿಹಾರ್ ಜೈಲಿಗೆ ಹೋಗುತ್ತಾರೆ. ಆ ನಿಟ್ಟಿನಲ್ಲಿ ವಕೀಲರ ತಂಡ ದೆಹಲಿಗೆ ಹೋಗಿದೆ. ವಕೀಲರ ತಂಡ ಯಾವ ಫ್ಲೈಟ್‌ನಲ್ಲಿ ಹೋಗಿದ್ದಾರೆ ಎಂಬುದನ್ನು ಡಿಸಿಎಂ ಹೇಳಬೇಕು ಎಂದು ಯತ್ನಾಳ್ ಹೊಸ ಬಾಂಬ್ ಸಿಡಿದ್ದಾರೆ.

ಸಿಗವಾಡಿ, ಮುದ್ನಾಕೋಡಿಗೆ ಭೇಟಿ

ಶಾಸಕ ಯತ್ನಾಳ್ ಅವರು, ಬಿಜೆಪಿ ಪಕ್ಷದ ವತಿಯಿಂದ ಕೈಗೊಂಡಿರುವ ಬರ ಅಧ್ಯಯನ ತಂಡದ ನೇತೃತ್ವವನ್ನು ವಹಿಸಿ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಸಿಗವಾಡಿ ಮತ್ತು ಮುದ್ನಾಕೋಡು ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿದರು. ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರಿಗೆ, ಬಿರುಗಾಳಿಯಿಂದ ಬಾಳೆ ಸೇರಿದಂತೆ ಇತರೆ ಬೆಳೆಗಳು ನೆಲಕ್ಕುರುಳಿರುವುದನ್ನು ವೀಕ್ಷಿಸಿದರು.

ಇದೇ ವೇಳೆ ಬರ ಮತ್ತು ಬಿರುಗಾಳಿಯಿಂದ ಸಂಕಷ್ಟದಲ್ಲಿರುವ ರೈತರು, ತಮ್ಮ ಸಮಸ್ಯೆಗಳನ್ನು ಬರ ಅಧ್ಯಯನ ತಂಡದೊಂದಿಗೆ ಹಂಚಿಕೊಂಡರು. ಈ ಸಂಕಟ ಸಮಯದಲ್ಲಿ ನೆರವಿಗೆ ನಿಲ್ಲದ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿದರು.

Exit mobile version