Site icon PowerTV

ಕೆಂಪಣ್ಣರನ್ನ ಅರೆಸ್ಟ್ ಮಾಡಿದ್ರೆ ಡಿಕೆಶಿಗೆ ಹಣ ತಲುಪಿದೆಯೋ? ಇಲ್ಲವೋ? ತಿಳಿಯಲಿದೆ : ಕೆ.ಎಸ್ ಈಶ್ವರಪ್ಪ

ಹಾವೇರಿ : ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಎಷ್ಟು ನಡೆಯುತ್ತಿದೆ ಎನ್ನುವುದನ್ನ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಕೂಡಲೇ ಕೆಂಪಣ್ಣ ಅವನ್ನು ಅರೆಸ್ಟ್​​ ಮಾಡಿ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಂಪಣ್ಣ ನಮ್ಮ ಸರ್ಕಾರದ ಮೇಲೂ ಆರೋಪ ಮಾಡಿದ್ದರು. ಆದರೆ, ನಾವು ದಾಖಲೆ ಕೊಡಿ ಅಂತಾ ಕೇಳಿದ್ದೆವು ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಕೋಟಿಗಟ್ಟಲೆ ಹಣ ವಸೂಲಿ ಮಾಡಿದೆ. ಈ ಸಂಬಂಧ ಮುಖ್ಯ ಎಂಜಿನಿಯರ್​​ರನ್ನ ತಕ್ಷಣ ಅರೆಸ್ಟ್ ಮಾಡಬೇಕು, ಕೆಂಪಣ್ಣ ಅವರನ್ನು ಅರೆಸ್ಟ್ ಮಾಡಬೇಕು. ಅರೆಸ್ಟ್​ ಮಾಡಿ ವಿಚಾರಣೆ ನಡೆಸಿದ್ರೆ, ಡಿಸಿಎಂ ಡಿ.ಕೆ. ಶಿವಕುಮಾರ್​ ಅವರಿಗೆ ಹಣ ತಲುಪಿದೆಯೋ? ಇಲ್ಲವೋ? ತಿಳಿಯಲಿದೆ ಎಂದು ಹೇಳಿದ್ದಾರೆ.

ಹೊಲಕ್ಕೆ ಯಾವ ಮಂತ್ರಿಯೂ ಹೋಗಿಲ್ಲ

ಹುಟ್ಟಿದಾಗಿನಿಂದ ಇಂತಹ ಬರಗಾಲ ನಾನು ನೋಡಿಲ್ಲ. ಎಲ್ಲಾ ಬೆಳೆ ನಾಶವಾಗಿದೆ, ರೈತ ಕಣ್ಣೀರು ಹಾಕುತ್ತಿದ್ದಾನೆ. ಆದರೆ, ರಾಜ್ಯ ಸರ್ಕಾರದ ಯಾವುದೇ ಮಂತ್ರಿಯು ಹೊಲಕ್ಕೆ ಹೋಗಿಲ್ಲ. ಬೆಳೆಹಾನಿ ಸರ್ವೆ ಮಾಡುವುದನ್ನು ತಡ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಕೊಡುವ ಬರ ಪರಿಹಾರದ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಎಐಸಿಸಿಗೆ 4 ವರ್ಷ ಅಧ್ಯಕ್ಷರೇ ಇರಲಿಲ್ಲ

ಬರಗಾಲ ಪರಿಹಾರ ಕೊಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್​​ ಶಾ ಅವರನ್ನು ನಾನು ಕೇಳಿದ್ದೇನೆ. ಇನ್ನು ಬಿಜೆಪಿಗೆ ರಾಜ್ಯಾಧ್ಯಕ್ಷರಿದ್ದಾರೆ ಆದರೂ ಕಾಂಗ್ರೆಸ್​ ಟೀಕೆ ಮಾಡ್ತಿದೆ. ಆದರೆ, ಎಐಸಿಸಿಗೆ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರೇ ಇರಲಿಲ್ಲ ಎಂದು ಕಾಂಗ್ರೆಸ್​ ನಾಯಕರಿಗೆ ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.

Exit mobile version