Site icon PowerTV

ಸಿದ್ದರಾಮಯ್ಯ ಕಾಲದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ : ಮಾಜಿ ಸಚಿವ ಬಿ.ಸಿ. ಪಾಟೀಲ್

ಕಲಬುರಗಿ : ಸಿಎಂ ಸಿದ್ದರಾಮಯ್ಯ ಕಾಲದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಕಾಂಗ್ರೆಸ್​ ಸರ್ಕಾರ ಬ್ಯಾಲೆನ್ಸ್​ ತಪ್ಪಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್​ ಗುಡುಗಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್​ ಸರ್ಕಾರ ಗ್ಯಾರಂಟಿಗಳಲ್ಲಿ ಮುಳುಗಿ ಹೋಗಿದೆ. ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಭೀಕರ ಬರ ಬಂದಿದೆ, ರಾಜ್ಯ ಸರ್ಕಾರ ಪರಿಹಾರ ನೀಡುವ ಬದಲು ಕೇಂದ್ರದತ್ತ ಬೆರಳು ಮಾಡ್ತಿದೆ. ಕಾಂಗ್ರೆಸ್​​ ಸರ್ಕಾರ ರೈತರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ನಾವು ಅಧಿಕಾರದಲ್ಲಿದ್ದಾಗ ರೈತರಿಗೆ ಸಾಕಷ್ಟು ಪರಿಹಾರ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ದಿವಾಳಿ ಆಗಿದೆ, ಅಭಿವೃದ್ಧಿ ಮಾಡದ ಸರ್ಕಾರ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಪಂಚಾಯಿತಿಗೆ 10 ಕೋಟಿ ನೀಡಿ

ಮಾಧ್ಯಮಗಳ ಮುಂದೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್​​​ ಅಧಿಕಾರಕ್ಕೆ ಬಂದಿದೆ. ನವಲಗುಂದ, ಅಣ್ಣಿಗೇರಿ, ಕಲಘಟಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನ ಗುಳೆ ಹೊರಟಿದ್ದಾರೆ. ಪ್ರತಿ ತಾಲೂಕು ಪಂಚಾಯಿತಿಗೆ 10 ಕೋಟಿ ರೂ. ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, 50 ವರ್ಷಗಳ ನಂತರ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಮುಂಗಾರು ಹಾಗೂ ಹಿಂಗಾರು ಬೆಳೆಗಳು ಕೈ ಕೊಟ್ಟಿವೆ. ರಾಜ್ಯ ಸರ್ಕಾರ ರಾಜ್ಯದ ಜನತೆಯ ಪರವಾಗಿ ನಿಲ್ಲಬೇಕಿತ್ತು. ಆದರೆ, ಸರ್ಕಾರ ನಿಲ್ಲುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Exit mobile version