Site icon PowerTV

ಉದ್ಯಮಿಗೆ ಪಾಸ್​ವರ್ಡ್ ನೀಡಿದ್ದು ನಿಜ : ತಪ್ಪೊಪ್ಪಿಕೊಂಡ ಟಿಎಂಸಿ ಸಂಸದೆ ಮೊಯಿತ್ರಾ

ನವದೆಹಲಿ : ಉದ್ಯಮಿಗೆ ಪಾಸ್‌ವರ್ಡ್‌ ನೀಡಿದ್ದು ನಿಜವೆಂದು  ಟಿಎಂಸಿ ಸಂಸದೆ ಒಪ್ಪಿಕೊಂಡಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹೀರಾನಂದಾನಿಗೆ ತಮ್ಮ ಸಂಸತ್ ಲಾಗಿನ್ ಐಡಿ ನೀಡಿದ್ದು ನಿಜವೆಂದು, ಸದ್ಯ ಸಂಸದೆ ಮಹುವಾ ಮೊಯಿತ್ರಾ ಒಪ್ಪಿಕೊಂಡಿದ್ದಾರೆ.

ಬಂಗಾಳಿ ಟಿವಿ ವಾಹಿನಿ ಜತೆ ಮಾತನಾಡಿದ ಅವರು, ನನ್ನ ಪ್ರಶ್ನೆಗಳನ್ನು ಟೈಪ್‌ ಮಾಡಲು ದರ್ಶನ್‌ ಅವರ ಸಿಬ್ಬಂದಿಗೆ ನನ್ನ ಸಂಸತ್‌ ಐಡಿಯ ಪಾಸ್‌ವರ್ಡ್‌ ನೀಡಿದ್ದು ನಿಜ. ಆದರೆ, ಒಟಿಪಿ ನನಗೆ ಬರುತ್ತಿತ್ತು. ನನ್ನ ಅನುಮೋದನೆಯ ನಂತರವೇ ಪ್ರಶ್ನೆ ಪೋಸ್ಟ್‌ ಆಗುತ್ತಿತ್ತು ಎಂದು ಹೇಳಿದ್ದಾರೆ. ಈ ಮೂಲಕ, ನನಗೆ ಗೊತ್ತಾಗದಂತೆ ಹೀರಾನಂದಾನಿ, ನನ್ನ ಪರ ಪ್ರಶ್ನೆ ಕೇಳುತ್ತಿದ್ದರು ಎಂಬ ಆರೋಪ ನಿರಾಕರಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸುತ್ತಿರುವ ಸಂಸತ್ತಿನ ನೈತಿಕ ಸಮಿತಿಯು ನವೆಂಬರ್ 2 ರಂದು ಹಾಜರಾಗುವಂತೆ ಮಹುವಾ ಮೊಯಿತ್ರಾಗೆ ಸಮನ್ಸ್‌ ನೀಡಿದೆ. ಅಕ್ಟೋಬರ್ 31 ರೊಳಗೆ ಹಾಜರಾಗುವಂತೆ ಈ ಹಿಂದೆ ನೋಟಿಸ್‌ ನೀಡಲಾಗಿತ್ತಾದ್ರೂ, ಆ ವೇಳೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಟಿಎಂಸಿ ಸಂಸದೆ ಹೇಳಿದ್ದರು.ಅವರು ಹೊಸ ದಿನಾಂಕವನ್ನು ಕೋರಿದ ನಂತರ ದಿನಾಂಕವನ್ನು ಬದಲಾಯಿಸಲಾಗಿದೆ.

Exit mobile version