Site icon PowerTV

ದಸರಾ ಜಂಬೂ ಸವಾರಿಗೆ ಚಾಲನೆ : ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ ಅಭಿಮನ್ಯು

ಮೈಸೂರು : ವಿಶ್ವವಿಖ್ಯಾತ 414ನೇ ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಅರಮನೆ ಆವರಣದಲ್ಲಿ ಶುಭ ಮೀನ ಲಗ್ನದಲ್ಲಿ ಅಭಿಮನ್ಯು ಆನೆಯ ಮೇಲೆ ವಿರಾಜಮಾ‌ನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​, ಜಿಲ್ಲಾ ಉಸ್ತುವಾರಿ ಡಾ.ಹೆಚ್​.ಸಿ. ಸಚಿವ ಮಹದೇವಪ್ಪ, ಸಚಿವರಾದ ಕೆ.ಹೆಚ್​. ಮುನಿಯಪ್ಪ, ವೆಂಕಟೇಶ್​, ಶಿವರಾಜ್​ ತಂಗಡಗಿ, ಕೆ.ಎನ್​.ರಾಜಣ್ಣ, ಭೈರತಿ ಸುರೇಶ್, ಸಂಸದ ಪ್ರತಾಪ್​ ಸಿಂಹ, ಮೇಯರ್ ಶಿವಕುಮಾರ್, ಡಿಸಿ ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.

ಅಭಿಮನ್ಯು ರಾಜ ಗಾಂಭೀರ್ಯ ನಡಿಗೆ

ಸತತ 4ನೇ ಬಾರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದನು. ಅರಮನೆಯಿಂದ ಆರಂಭವಾದ ಜಂಬೂ ಸವಾರಿ ಬನ್ನಿಮಂಟಪದವರೆಗೆ ನಡೆಯಲಿದೆ. ದಸರಾ ಉತ್ಸವದ ಮುಖ್ಯ ಘಟ್ಟವಾದ ಜಂಬೂ ಸವಾರಿಯನ್ನು ಕಣ್ಣುಂಬಿಕೊಳ್ಳಲು 5 ಲಕ್ಷ ಮಂದಿ ಪಾಲ್ಗೊಂಡಿದ್ದರು. ಅರಮನೆ ಆವರಣದಲ್ಲೇ 30 ಸಾವಿರಕ್ಕೂ ಹೆಚ್ಚು ಮಂದಿ ಆಸನ ವ್ಯವಸ್ಥೆ ಮಾಡಲಾಗಿತ್ತು.

ಅಭಿಮನ್ಯುಗೆ ಲಕ್ಷ್ಮೀ, ವಿಜಯಾ ಸಾಥ್

750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತಿರುವ ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದೆ. ಜಂಬೂ ಸವಾರಿಯಲ್ಲಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿದ್ದು, ಲಕ್ಷಾಂತರ ಜನರು ದಸರಾ ಜಂಬೂಸವಾರಿಗೆ ಸಾಕ್ಷಿಯಾದರು.

Exit mobile version