Site icon PowerTV

YST ಆಯ್ತು ಈಗ SST ಟ್ಯಾಕ್ಸ್ ಕಲೆಕ್ಷನ್ ಶುರುವಾಗಿದೆ : ಹೆಚ್.ಡಿ ಕುಮಾರಸ್ವಾಮಿ

ಮೈಸೂರು : ರಾಜ್ಯದಲ್ಲಿ YST ಆಯ್ತು ಈಗ SST ಟ್ಯಾಕ್ಸ್ ಕಲೆಕ್ಷನ್ ಆರಂಭವಾಗಿದೆ. ಐಟಿ ರೇಡ್​ನಲ್ಲಿ ‌ಸಿಕ್ಕ ಹಣ SST ಟ್ಯಾಕ್ಸ್​ಗೆ ಸೇರಿದ್ದು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬಿಕಾಪತಿ ಮನೆಯಲ್ಲಿ ಸಿಕ್ಕ ಹಣ SST ಕಲೆಕ್ಷನ್, ಸಂತೋಷ್‌ ಮನೆಯಲ್ಲಿ ಸಿಕ್ಕಿದ್ದು YST ಕಲೆಕ್ಷನ್ ಹಣ ಎಂದು ಕುಟುಕಿದರು.

ಸಿಎಂ ಈ ಬಗ್ಗೆ ತನಿಖೆ ಮಾಡಿ ಪ್ರಾಮಾಣಿಕತೆ ತೋರಬೇಕು. ಭ್ರಷ್ಟಾಚಾರ ಮಾಡಿ ದೇವರ ಮುಂದೆ ಬಂದು ಪ್ರಾರ್ಥಿಸಿದರೆ ದೇವಿ ಕ್ಷಮಿಸೋದಿಲ್ಲ. ಲೂಟಿ ಮಾಡುವವರು ತಿಹಾರ್ ಜೈಲಿಗೆ ಹೋಗುವುದು ತಪ್ಪುವುದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಲು ಇಲಾಖೆಗಳು ಪೈಪೋಟಿಗೆ ಬಿದ್ದಿವೆ. ಭ್ರಷ್ಟಾಚಾರ ನಡೆಯುತ್ತಿದೆ‌ ಎಂಬುದಕ್ಕೆ ಹಣ ಪತ್ತೆಗಿಂತ ಸಾಕ್ಷಿಬೇಕೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರಾಜ್ಯದಲ್ಲಿ ಕೃಷಿ ವಲಯ ಸೇರಿದಂತೆ ಜನರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ನಾಡಿನ ಜನತೆಗೆ ತಾಯಿ ಆಶಿರ್ವಾದ ಸಿಗಲಿ ಎಂಬುದು ನನ್ನ ಪ್ರಾರ್ಥನೆ. ಬರಗಾಲದ ಬಗ್ಗೆ ಕೃಷಿ ಸಚಿವರು, ಕಂದಾಯ ಸಚಿವರ ಹೇಳಿಕೆ ಗಮನಿಸಿದ್ದೇನೆ. ಬರದ ಜೊತೆಗೆ ವಿದ್ಯುತ್ ಅಭಾವ ಕೂಡ ಎದುರಾಗಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಈಗಾಗಲೇ ನಾನು ಹೇಳಿದ್ದೆ. ಮುಂದಿನ ಎರಡು ತಿಂಗಳ ಬಳಿಕ ಇನ್ನು ದುಸ್ತರ ಪರಿಸ್ಥಿತಿ ಬರಲಿದೆ ಎಂದರು.

ಜನರೇ ತಿರುಗಿ ಬೀಳುವ ಪರಿಸ್ಥಿತಿ ಬರುತ್ತೆ

ರೈತರ, ಜನರ ಬದುಕಿನ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಬರೀ ಗ್ಯಾರೆಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ನಿತ್ಯ ಕ್ಷೇತ್ರಕ್ಕೆ ಹೋಗಲು ಆಗದ ಸ್ಥಿತಿ ಇದೆ ಎನ್ನುತ್ತಾರೆ. ಇವರು ಮಾತ್ರ ಬೆನ್ನು ತಟ್ಟಿಕೊಂಡು ಓಡಾಡುತ್ತಿದ್ದಾರೆ. ಜನರೇ ತಿರುಗಿ ಬೀಳುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Exit mobile version