Site icon PowerTV

TV ರಿಮೋಟ್​ಗಾಗಿ ಜಗಳ : ತಂದೆಯಿಂದಲೇ ಮಗನ ಹತ್ಯೆ

ಚಿತ್ರದುರ್ಗ : ಟಿವಿ ರಿಮೋಟ್​ಗಾಗಿ ಶುರುವಾದ ಜಗಳ ಮಗನ ಸಾವಿನಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.

ಚಂದ್ರಶೇಖರ್ (16) ಮೃತ ದುರ್ದೈವಿ ಬಾಲಕ. ಲಕ್ಷ್ಮಣಬಾಬು ಮಗನ ಹತ್ಯೆಗೆ ಕಾರಣನಾದ ತಂದೆ. ಮೃತ ಚಂದ್ರಶೇಖರ್‌ ಹಾಗೂ ತಮ್ಮ ಪವನ್ (14) ಟಿವಿ ರಿಮೋಟ್​ಗಾಗಿ ಗಲಾಟೆ ಮಾಡಿಕೊಂಡಿದ್ದರು. ತಂದೆ ಸಿಟ್ಟಿಗೆದ್ದು ಹಿರಿಮಗನ ಮೇಲೆ ಕತ್ತರಿ‌ ಎಸೆದಿದ್ದಾನೆ. ಬಾಲಕನ ಕತ್ತಿಗೆ ಕತ್ತರಿ ಏಟು ಬಿದ್ದು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.

ಮನೆಯಲ್ಲಿ ಪದೇ ಪದೆ ಟಿವಿ ರಿಮೋಟ್‌ಗಾಗಿ ಚಂದ್ರಶೇಖರ್ ಹಾಗೂ ಪವನ್ ಮಧ್ಯೆ ಜಗಳ ಆಗುತ್ತಿತ್ತು. ಇದನ್ನು ನೋಡಿದ ತಂದೆ, ಇಂದು ಸಿಟ್ಟಿಗೆದ್ದು ಕತ್ತರಿ ಎಸೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಇನ್ನು ಬಟ್ಟೆ ಕತ್ತರಿಸುವ ಕತ್ತರಿಯು ಭಾರವಾಗಿದ್ದು, ಕುತ್ತಿಗೆ ಹಾಗೂ ಕಿವಿ ಭಾಗಕ್ಕೆ ಚುಚ್ಚಿಕೊಂಡು ತೀವ್ರ ಹಾನಿಯಾಗಿದೆ. ಇದರಿಂದ ದಿಢೀರ್ ಕೆಳಗೆ ಕುಸಿದು ಬಿದ್ದ ಚಂದ್ರಶೇಖರ್ ರಕ್ತ ಸ್ರಾವದಿಂದ‌ ಕೊನೆಯುಸಿರೆಳೆದಿದ್ದಾನೆ.

ತಂದೆ ಲಕ್ಷ್ಮಣಬಾಬು ವಿರುದ್ಧ ಪುತ್ರನ ಹತ್ಯೆ ಆರೋಪ ಕೇಳಿಬಂದಿದೆ. ಮೊಳಕಾಲ್ಮೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತಂದೆಯ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version