Site icon PowerTV

ಚಾಮುಂಡಿ ಬೆಟ್ಟ ಸೇರಿ ಮೈಸೂರು ನಗರದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ

ಮೈಸೂರು : ಮಹಿಷ ದಸರಾ ಪರ ವಿರೋಧ ವಿವಾದ ವಿಚಾರ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತರು 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚಾಮುಂಡಿ ಬೆಟ್ಟ ಸೇರಿ (ಟೌನ್ ಹಾಲ್ ಹೊರತುಪಡಿಸಿ) ಮೈಸೂರು ನಗರದ ವ್ಯಾಪ್ತಿಯಲ್ಲಿ ಸೆಕ್ಷನ್ 144  ಜಾರಿ ಇರಲಿದೆ. ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಇಂದು (ಅಕ್ಟೋಬರ್ 12) ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ 14ರ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ಸಭೆ ಸಮಾರಂಭ, ರ್ಯಾಲಿ ಹಾಗೂ ಮೆರವಣಿಗೆ ನಡೆಸದಂತೆ ನಿಷೇಧ ಹೇರಲಾಗಿದೆ.

ಯಾವುದೇ ಸಂಘಟನೆ ಅಥವಾ ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಹಾಗೂ ಸಭೆ-ಸಮಾರಂಭ ಮೆರವಣಿಗೆ, ಪ್ರತಿಭಟನೆ, ರಾಲಿ ನಡೆಸಲು ಪ್ರಯತ್ನಿಸಿದಲ್ಲಿ ಅಲ್ಲಿ ಸೇರಿರುವ ಜನರ ಕೂಟವನ್ನು ಅಕ್ರಮ ಕೂಟವೆಂದು ಪರಿಗಣಿಸಿ, ಆದೇಶ ಉಲ್ಲಂಘನೆ ಕುರಿತಂತೆ ಕಾನೂನು ಕ್ರಮಕೈಗೊಳ್ಳಲಾಗುವುದು.

ಈ ಆದೇಶವು ಮದುವೆ ಸಮಾರಂಭಗಳಿಗೆ ಮತ್ತು ಶವಸಂಸ್ಕಾರಗಳಿಗೆ ಹಾಗೂ ಶಾಲಾ, ಕಾಲೇಜು ಮತ್ತು ಪರೀಕ್ಷೆಗಳಿಗೆ ತೆರಳುವವರಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Exit mobile version