Site icon PowerTV

BSY ಪರಿವರ್ತನೆ ಮಾಡಿದ್ರು, ಇಲ್ಲಾಂದ್ರೆ ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರ್ತಿದ್ದೆ : ರೇಣುಕಾಚಾರ್ಯ

ಶಿವಮೊಗ್ಗ : ಯಡಿಯೂರಪ್ಪ ಒಬ್ಬ ಶಿಲ್ಪಿಯಿದ್ದಂತೆ, ನಾನೊಬ್ಬ ಕಾಡುಗೊಲ್ಲನಾಗಿದ್ದೆ. ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಇಲ್ಲಾಂದ್ರೆ ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರ್ತಿದ್ದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಮೇಲೆ ಗೌರವವಿದೆ. ಯಡಿಯೂರಪ್ಪ ಅವರಂತಹ ನಾಯಕ ದಕ್ಷಿಣ ಭಾರದತದ ಬಿಜೆಪಿಯಲ್ಲಿ ಸಿಗರು. ಮೋದಿ ಭಾವಚಿತ್ರ ಹಿಡಿದು ಹೋದರೆ ಮತ ಸಿಗುತ್ತಾ? ಯಡಿಯೂರಪ್ಪ ಅವರಿಗೆ ಮಾತ್ರ ಮತ ಗಳಿಸುವ ಶಕ್ತಿ ಇದೆ ಎಂದು ತಿಳಿಸಿದರು.

ಯಡಿಯೂರಪ್ಪ ಕಡೆಗೆಣಿಸಿ ರಬ್ಬರ್ ಸ್ಟಾಂಪ್ ರಾಜ್ಯಾಧ್ಯಕ್ಷ ಬೇಕಾ? ಯಡಿಯೂರಪ್ಪ ಕಣ್ಣೀರಿನಿಂದ ಬಿಜೆಪಿ ನೆಲಕಚ್ಚಿದೆ. ಯಡಿಯೂರಪ್ಪ ಸೈಕಲ್, ಬೈಕ್, ಕಾರು ಮೂಲಕ ಪಕ್ಷ ಸಂಘಟನೆ ಮಾಡಿದವರು. ಯಡಿಯೂರಪ್ಪ ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತಾ? ಕೋರ್ ಕಮಿಟಿ ಯಾಕೆ ಬೇಕು, ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ? ಯಡಿಯೂರಪ್ಪ ಅವರನ್ನು ಮುಗಿಸಿದರಲ್ವ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸ್ವಪಕ್ಷದವರ ಮೇಲೆಯೇ ಗುಡುಗಿದರು.

ಕೇಸರಿ ಹಿಂದುತ್ವ ಎಂದಿಗೂ ಇರುತ್ತೆ

ಸರ್ವಾಧಿಕಾರಿ ಧೋರಣೆ ಮಾಡಬೇಡಿ. ರಾಜ್ಯಸಭೆ, ವಿಧಾನಪರಿಷತ್ ನೇಮಕ ಆದವರು ಯಾರಿಗೋ ಮಂಡಿಯೂರಿದ್ದಾರೆ. ಹೋರಾಟ ಹಿನ್ನೆಲೆಯಿಂದ ಬಂದವರು ಯಡಿಯೂರಪ್ಪ. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆಕಚ್ಚುತ್ತೆ. ಗುಜರಾತ್ ಮಾದರಿ ಮಾಡಲು ಹೋಗಿ 70 ಜನ ಹೊಸಬರಿಗೆ ಟಿಕೆಟ್ ನೀಡಿದರು. ಜಗದೀಶ್ ಶೆಟ್ಟರ್ ಅಂಥವರನ್ನು ಕಡೆಗೆಣಿಸಿದರು. ಯಡಿಯೂರಪ್ಪ ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಡಲು ಹೋಗಿದ್ರು. ಅದಕ್ಕೆ ಬ್ರೇಕ್ ಹಾಕಿದ್ರು. ನಾನು ಬಿಜೆಪಿ ಕಟ್ಟಾಳು, ಕೇಸರಿ ಹಿಂದುತ್ವ ಎಂದಿಗೂ ಇರುತ್ತೆ ಎಂದು ರೇಣುಕಾಚಾರ್ಯ ಹೇಳಿದರು.

Exit mobile version