Site icon PowerTV

ಮಕ್ಮಲ್ ಟೋಪಿ : ಅಯ್ಯೋ.. 10 ರೂಪಾಯಿ ಆಸೆಗೆ ಕೈಯಲ್ಲಿದ್ದ 1 ಲಕ್ಷ ಕಳೆದುಕೊಂಡ ವ್ಯಕ್ತಿ

ರಾಮನಗರ : ಚಿಲ್ಲರೆ ತೋರಿಸಿ 1 ಲಕ್ಷ ಹಣ ದೋಚಿದ ಕಿರಾತಕರು. ಕೇವಲ 10 ರೂಪಾಯಿ ಆಸೆಗೆ ವ್ಯಕ್ತಿಯೊಬ್ಬ ಬರೋಬ್ಬರಿ 1 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಕೆನರಾ ಬ್ಯಾಂಕ್ ಬಳಿ ನಡೆದಿದೆ.

ನಗರದ ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಹಣ ಕಳೆದುಕೊಂಡ ವ್ಯಕ್ತಿ. ರಾಘವೇಂದ್ರ ಅವರು ಬ್ಯಾಂಕ್ ಹೋಗಿ ಹಣ ಡ್ರಾ ಮಾಡಿಕೊಂಡು ಬರ್ತಿದ್ದರು. ಎಟಿಎಂ ನಿಂದ ಹೊರಬಂದು ಬೈಕ್ ಬಳಿ ನಿಂತಿದ್ದರು. ಈ‌ ವೇಳೆ ಅಪರಿಚಿತ ವ್ಯಕ್ತಿಯೋರ್ವ ಹತ್ತು ರೂಪಾಯಿ ನೋಟುಗಳು ಬೀಳಿಸಿ ಹಣ ಬಿದ್ದಿದೆ ನೋಡಿ ಅಂತ ಹೇಳಿ ಮುಂದೆ ಹೋಗಿದ್ದಾನೆ. ಆಮೇಲೆ ನಡೆದಿದ್ದೇ ದೋಖಾ.

ರಾಘವೇಂದ್ರ ಅವರು ಕೈಯಲ್ಲಿದ್ದ ಒಂದು ಲಕ್ಷ ಹಣದ ಕವರನ್ನು ಬೈಕ್ನಲ್ಲಿ ಇಟ್ಟು ಜಸ್ಟ್ 10 ರೂಪಾಯಿ ನೋಟು ಎತ್ತಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಮತ್ತೋರ್ವ ಖದೀಮ ಬಂದು ಬೈಕ್ ನಲ್ಲಿದ್ದ 1 ಲಕ್ಷ ಹಣ ದೋಚಿ ಎಸ್ಕೇಪ್ ಆಗಿದ್ದಾನೆ. ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಣ ಕಳೆದುಕೊಂಡು ಹತಾಶೆ

ಹತ್ತು ರೂಪಾಯಿಗೆ ಆಸೆ ಬಿದ್ದು ತನ್ನ ಕೈಯಲ್ಲಿದ್ದ ಒಂದು ಲಕ್ಷ ಹಣ ಕಳೆದುಕೊಂಡ ರಾಘವೇಂದ್ರ ಹತಾಶರಾಗಿದ್ದಾರೆ. ಈ ಬಗ್ಗೆ ಚನ್ನಪಟ್ಟಣ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಖತರ್ನಾಕ್ ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.

Exit mobile version