Site icon PowerTV

ಪಟಾಕಿ ದುರಂತ: ಮೃತರ ಕುಟುಂಬಗಳಿಗೆ ಸರ್ಕಾರ ನೆರವಾಗುವಂತೆ ಹೆಚ್​​ಡಿಕೆ ಮನವಿ!

ಬೆಂಗಳೂರು : ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಸಂಗ್ರಹಗಾರದಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ 14 ಜನ ಕಾರ್ಮಿಕರು ದುರಂತ ಸಾವು ಕಂಡಿರುವ ಘಟನೆಯ ಬಗ್ಗೆ ತಿಳಿದು ನನಗೆ ತೀವ್ರ ದಿಗ್ಭ್ರಮೆ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದಿಕೊಂಡಿರುವ ಅವರು, ದೀಪಾವಳಿಗೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಈ ಮುಗ್ಧ ಜೀವಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಬಲಿಯಾಗಿರುವ ಘಟನೆ ನನ್ನ ಮನವನ್ನು ಕಲಕಿದೆ.

ಜೀವ ಕಳೆದುಕೊಂಡ ಎಲ್ಲಾ ನತದೃಷ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕುಟುಂಬಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸಂಭವಿಸಿರುವ ಈ ಘಟನೆ ಅನೇಕ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ. ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ಇದ್ದಿದ್ದೇ ದುರಂತಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಬದುಕು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರಕಾರ ಆಸರೆಯಾಗಿ ನಿಲ್ಲಬೇಕು ಎಂದು ಸರ್ಕಾರಕ್ಕೆ ಮನವಿ ಕೊಂಡಿದ್ದಾರೆ.

Exit mobile version