Site icon PowerTV

ತಮಿಳುನಾಡಿಗೆ ಮತ್ತೆ ನೀರು: ಪ್ರಾಧಿಕಾರದ ಆದೇಶ ಪ್ರಶ್ನಿಸಿ ಮೇಲ್ಮನವಿಗೆ ತಜ್ಞರೊಂದಿಗೆ ಚರ್ಚೆ!-ಸಿಎಂ

ಬೆಂಗಳೂರು : ತಮಿಳುನಾಡಿಗೆ ಮುಂದಿನ ಹದಿನೆಂಟು ದಿನಗಳ ಕಾಲ 3,000 ಕ್ಯೂಸೆಕ್ಸ್ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಆಘಾತಕಾರಿಯಾದುದು. ಈ ಬಗ್ಗೆ ಕಾನೂನು ತಂಡದ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಕರ್ನಾಟಕ ಎದುರಿಸುತ್ತಿರುವ ಮಳೆ ಕೊರತೆಯ ಅಂಕಿ-ಅಂಶ, ಜಲಾಶಯಗಳ ನೀರಿನ ಸಂಗ್ರಹ ಮತ್ತು ರೈತರ ಬೆಳೆಗೆ ಮತ್ತು ಕುಡಿಯುವ ನೀರು ಪೂರೈಸಲು ಅವಶ್ಯಕತೆ ಇರುವ ನೀರಿನ ಪ್ರಮಾಣದ ಸಂಪೂರ್ಣ ವಿವರವನ್ನು ನಮ್ಮ ಅಧಿಕಾರಿಗಳು ಸಮಿತಿಗೆ ನೀಡಿದ್ದಾರೆ.

ಇದನ್ನೂ ಓದಿ: ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ಎಡವಿದೆ: ಬಿ.ವೈ.ವಿಜಯೇಂದ್ರ

ಇದರ ನಂತರವೂ ಸಮಿತಿ ಇಂತಹ ನಿರ್ಧಾರಕ್ಕೆ ಬಂದಿರುವುದು ಅಚ್ಚರಿ ಉಂಟು ಮಾಡಿದೆ. ನೀರು ಹಂಚಿಕೆಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಅಂತರರಾಜ್ಯ ಜಲವಿವಾದ ಕಾಯ್ದೆ ಸ್ಪಷ್ಟವಾಗಿ ಹೇಳಿದೆ.

ನಾವು ಕಳೆದ ಒಂದು ತಿಂಗಳಿನಿಂದ ಪ್ರಧಾನಿ ಮಧ್ಯಸ್ಥಿಕೆಗಾಗಿ ಮನವಿ ಮಾಡುತ್ತಿದ್ದೇವೆ. ಅವರ ಭೇಟಿಗಾಗಿ ಅವಕಾಶ ಕೋರಿದ್ದೇವೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕೂಡಾ ಪತ್ರ ಬರೆದಿದ್ದಾರೆ. ಇದು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿವಾದವಾದ ಕಾರಣ ಕೇಂದ್ರ ಸರ್ಕಾರ ಮಾತ್ರ ಮಧ್ಯಸ್ಥಿಕೆ ವಹಿಸಿ ಪರಿಹರಿಸಲು ಸಾಧ್ಯವಿದೆ.

ಹಿಂದೆ ಇಂತಹದ್ದೇ ಪರಿಸ್ಥಿತಿ ಉದ್ಭವಿಸಿದಾಗ ವಾಸ್ತವಾಂಶವನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಕಳಿಸಿದ್ದ ನಿದರ್ಶನಗಳಿವೆ. ಕೇಂದ್ರ ಸರ್ಕಾರ ಈಗಲಾದರೂ ಮಧ್ಯಪ್ರವೇಶ ಮಾಡಿ ಈ ಬಿಕ್ಕಟ್ಟನ್ನು ಪರಿಹರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಅವರು ಸುಧೀರ್ಘ ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ.

Exit mobile version