Site icon PowerTV

ಹೆಚ್​ಡಿಕೆ ದೆಹಲಿ ಭೇಟಿ ಬಗ್ಗೆ ಗುಟ್ಟು ಬಿಟ್ಟುಕೊಡದ ಬಿಎಸ್​ವೈ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಅಸಮಾಧಾನ ಇರುವುದು ಜಗಜ್ಜಾಹಿರು ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ವಿಚಾರದಲ್ಲಿ ಕಾಂಗ್ರೆಸ್​ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ಮಿತ್ರ ಪಕ್ಷವಾದ ಡಿಎಂಕೆ ಜೊತೆ ಮಾತನಾಡಬೇಕು. ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರ ನೀರು ಬಿಟ್ಟು ತಪ್ಪು ಮಾಡಿತು. ಈಗ ಕೋರ್ಟ್ ಮುಂದೆ ಸಮರ್ಪಕ ವಾದ ಮಂಡಿಸುವಲ್ಲಿ ವಿಫಲವಾಯಿತು. ಸರಿಯಾಗಿ ಹೋಂ ವರ್ಕ್ ಮಾಡದೇ ಕೋರ್ಟ್ ಮೆಟ್ಟಿಲೇರಿರುವುದು ಸಾಬೀತಾಗಿದೆ. ಇವತ್ತಿನ ಸುಪ್ರೀಂ ಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ ವಾಸ್ತವಿಕ ಪರಿಸ್ಥಿತಿ ವಿವರಿಸಬೇಕು ಎಂದು ಹೇಳಿದರು.

ಈಗ ಮತ್ತೆ ತಪ್ಪು ಮಾಡುವುದು ಬೇಡ

ಸುಪ್ರೀಂ ಕೋರ್ಟ್​ನ ನ್ಯಾಯಾಧೀಶರ ಸಮಿತಿಯನ್ನು ರಾಜ್ಯಕ್ಕೆ ಕಳುಹಿಸಿ, ಜಲಾಶಯಗಳಿಗೆ ಭೇಟಿ ಕೊಟ್ಟು ವಾಸ್ತವ ಸ್ಥಿತಿ ಅಧ್ಯಯನ ಮಾಡುವಂತೆ ಮೇಲ್ಮನವಿ ಸಲ್ಲಿಸಬೇಕು. ಪ್ರಾಧಿಕಾರದ ಆದೇಶಕ್ಕೆ ನಾವು ಮಧ್ಯ ಪ್ರವೇಶ ಮಾಡಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ ಆದೇಶಕ್ಕೂ ಮೊದಲೇ ನೀರು ಬಿಟ್ಟು ತಪ್ಪು ಮಾಡಿದ್ರು. ಈಗ ಕೋರ್ಟ್​ನಲ್ಲಿ ಸರಿಯಾಗಿ ವಾದ ಮಂಡಿಸದೇ ವಿಫಲರಾದರು. ಈಗ ಮತ್ತೆ ತಪ್ಪು ಮಾಡುವುದು ಬೇಡ, ಮೇಲ್ಮನವಿ ಸಲ್ಲಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.

ಮೈತ್ರಿ ಬಗ್ಗೆ ಚರ್ಚೆ ಮಾಡಲು ಕುಮಾರಸ್ವಾಮಿ ದೆಹಲಿಗೆ ಹೋದ ವಿಚಾರವಾಗಿ ಮಾತನಾಡಿ, ನನಗೆ ಯಾವುದೇ ಮಾಹಿತಿ ಇಲ್ಲ. ಮೈತ್ರಿ ಬಗ್ಗೆ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಬಿಎಸ್​ವೈ ಗುಟ್ಟು ಬಿಟ್ಟುಕೊಡಲಿಲ್ಲ.

Exit mobile version