ಬೇರೆ ಯಾರೂ ಬೆಳೆಯಬಾರದಾ ? ಯಾರೂ ಮುಖ್ಯಮಂತ್ರಿ ಆಗಬಾರದಾ? : ಪ್ರಣವಾನಂದ ಸ್ವಾಮೀಜಿ

ಬೆಂಗಳೂರು : ಬೇರೆ ಯಾರೂ ಬೆಳೆಯಬಾರದಾ? ಯಾರೂ ಮುಖ್ಯಮಂತ್ರಿ ಆಗಬಾರದಾ? ಒಬ್ಬರೇ ಎಲ್ಲಾ ಅಧಿಕಾರ ಬೇಕೆಂದರೆ ಹೇಗೆ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾವೇಶ ಅವರು ಮಾತನಾಡಿದರು.

ನಾವು ಯಾರ ವಿರುದ್ಧವೂ ಸಮಾವೇಶ ನಡೆಸುತ್ತಿಲ್ಲ. ಯಾವುದೇ ವ್ಯಕ್ತಿ, ಸರ್ಕಾರ, ಪಕ್ಷದ ವಿರುದ್ಧದ ಸಮಾವೇಶವಲ್ಲ. ಯಾವುದೇ ಸಚಿವ ಸ್ಥಾನ ಪಡೆಯುವ ಸಲುವಾಗಿ ಅಲ್ಲ. ಆದರೆ, ನಡೆಸಿಕೊಳ್ಳುವ ರೀತಿ ಇದೆಯಲ್ಲ.. ಅದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಅಸಮಾಧಾನಗೊಂಡರು.

ಅಹಿಂದ ಹೆಸರಿನಿಂದ ಅಧಿಕಾರ

ಅಹಿಂದ ಬೆಳವಣಿಗೆಗೆ ಆರ್.ಎಲ್ ಜಾಲಪ್ಪ, ನಾರಾಯಣ ಸ್ವಾಮಿ ಸಹಕಾರ ನೀಡಿದವರು. ಆರ್ಥಿಕ ಸಹಕಾರ ನೀಡಿ ಅಹಿಂದ ಚಳವಳಿಗೆ ಬೆನ್ನೆಲುವಾಗಿ ನಿಂತಿದ್ದರು. ಆದರೆ, ಅಹಿಂದ ಹೆಸರನ್ನು ಹೇಳಿಕೊಂಡು ಬೆಳೆದವರೇ ಬೇರೆ. ಹಿಂದುಳಿದವರ ಹೆಸರು ಹೇಳಿಕೊಂಡು ಅಧಿಕಾರ ಸ್ಥಾನಮಾನ ಪಡೆದು ಬೆಳೆದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಭಿಕ್ಷೆ ಬೇಡುವ ಸಮುದಾಯ ಅಲ್ಲ

ಹಿಂದುಳಿದ ವರ್ಗಕ್ಕೆ ಶಕ್ತಿ ಕೊಟ್ಟ ನಾಯಕರು ಎಲ್ಲಿದ್ದಾರೆ? ಇಂಥ ನಾಯಕರನ್ನು ನಡೆಸುಕೊಳ್ಳುತ್ತಿರುವ ರೀತಿ ಸರಿ ಇಲ್ಲ. ಅತಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಎಲ್ಲಿ ಅವಕಾಶ ಕೊಟ್ಡಿದ್ದೀರಿ? ವಿಧಾನಸಭೆಯಲ್ಲಿ ಪ್ರವೇಶ ಮಾಡುವುದಕ್ಕೆ ಸಣ್ಣ ಸಣ್ಣ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದೀರಾ? ಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಭಿಕ್ಷೆ ಬೇಡುವ ಸಮುದಾಯ ಅಲ್ಲ. ಅಂಥ ಸಮುದಾಯಗಳ ನಾಯಕರನ್ನೇ ಷಡ್ಯಂತ್ರದಿಂದ ದೂರ ಮಾಡಲಾಗುತ್ತಿದೆ ಎಂದು ಬೇಸರಿಸಿದರು.

ನಾಲ್ಕು ಜಿಲ್ಲೆಯಲ್ಲಿ ನಾವೇ ಕಿಂಗ್

ಹಿಂದೆ ದೇವರಾಜ ಅರಸು ಅವರ ಸಂಪುಟದಲ್ಲಿ ಬಂಗಾರಪ್ಪ ಅವರನ್ನು ಸೇರ್ಪಡೆ ಮಾಡಿಕೊಳ್ಳಬಾರದು ಅಂತ ಪತ್ರ ದೆಹಲಿಯಿಂದ ಬಂದಿತ್ತು. ಈಗ ಇಲ್ಲಿಂದಲೇ ಪತ್ರ ಹೋಗುತ್ತದೆ. ನಾವು ಈಡಿಗ ಸಮುದಾಯದ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಅಂತ. ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ ನಾಲ್ಕು ಜಿಲ್ಲೆಯಲ್ಲಿ ನಾವೇ ನಿರ್ಣಾಯಕ ಸಮುದಾಯ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES