ಬೆಳಗಾವಿ : ಬಿಜೆಪಿ ಹಾಗೂ ಜೆಡಿಎಸ್ನವರು ಮೈತ್ರಿ ಮಾಡಿಕೊಂಡ್ರೆ ಸ್ವಾಗತಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರು ಮೈತ್ರಿ ಮಾಡಿಕೊಂಡರೆ ನಾವು ಸ್ವಾಗತಿಸುತ್ತೇವೆ. ಆದರೆ, ಅವರ ಮುಖವಾಡ ಕಳಚಿತು ಎಂದು ಕುಟುಕಿದರು.
ಚುನಾವಣೆ ಯಾವ ರೀತಿ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಜನರ ಆಶೋತ್ತರಗಳೇನು ಎಂಬುದು ನಮಗೆ ಗೊತ್ತು. ಅವುಗಳನ್ನು ಯಾವ ರೀತಿ ಈಡೇರಿಸುತ್ತಿದ್ದೇವೆ. ಒಳ್ಳೆಯ ರೀತಿಯಿಂದ ಸರ್ಕಾರ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಜೆಡಿಎಸ್ ಯುಪಿಎ ಒಕ್ಕೂಟದಲ್ಲಿತ್ತು ಎಂಬ ಸುದ್ದಿಗಾರರ ಪ್ರಶ್ನೆಗೆ, ಅದರ ಬಗ್ಗೆ ಹಿರಿಯರು, ದೊಡ್ಡವರು ಮಾತನಾಡುತ್ತಾರೆ ಎಂದರು. ಬಿಜೆಪಿ-ಜೆಡಿಎಸ್ನವರು ಕಾಂಗ್ರೆಸ್ ಸೇರ್ಪಡೆಯ ಆಸಕ್ತಿಯಿಂದ ಮೈತ್ರಿ ಮಾಡಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆಗೆ, ಯಾರ್ಯಾರು ಕಾಂಗ್ರೆಸ್ಗೆ ಬರುತ್ತಿದ್ದಾರೆ, ಯಾರಿಗೆ ಭಯ ಇದೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಬೆಳಗಾವಿಯಿಂದ ಶೆಟ್ಟರ್ ಸ್ಪರ್ಧೆ?
ಜಗದೀಶ್ ಶೆಟ್ಟರ್ ಅವರು ಬೆಳಗಾವಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ, ಅಂತೆ ಕಂತೆಗಳಿಗೆ ನಾನು ಉತ್ತರ ಕೊಡಲ್ಲ. ಹೈಕಮಾಂಡ್ ಮತ್ತು ಬೆಳಗಾವಿ ಜಿಲ್ಲೆಯ ನಾಯಕರಿದ್ದಾರೆ. ಕುಳಿತುಕೊಂಡು ಚರ್ಚೆ ಮಾಡಿ ಯಾರು ಅಭ್ಯರ್ಥಿ ಆಗಬೇಕೆಂದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.


