ಬೆಂಗಳೂರು: ದೇವರಾಜ ಅರಸು ಕಾರಿನಲ್ಲಿ ಕುಳಿತರೆ ನೀವು ದೇವರಾಜ ಅರಸು ಆಗೋದಿಲ್ಲ,
ದೇವರಾಜ ಅರಸು ಚಿಂತನೆ ಇರಬೇಕು ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ದ ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪ ಮಾಡದೆ ವಾಗ್ದಾಳಿ ನಡೆಸಿದ್ದಾರೆ. ಅವರೆಲ್ಲಾ ಸಮಾಜವಾದಿಗಳಲ್ಲ ಮಜವಾದಿಗಿಳು, ಪಂಚೆ ಹಾಕೊಂಡು ಹ್ಯೂಬ್ಲೆಟ್ ವಾಚ್ ಹಾಕೊಳ್ತಾರೆ, ಒಳಗಡೆ ಖಾಕಿ ಚಡ್ಡಿಹಾಕೊಂಡವರನ್ನೆಲ್ಲಾ ಸಮಾಜವಾದ ಎಂದು ಹೇಳಲಿಕ್ಕೆ ಆಗೊದಿಲ್ಲ.
ಕೆಲವರು ಹರಿಪ್ರಸಾದ್ ಬಗ್ಗೆ ಹಗುರವಾಗಿ ತಿಳಿದುಕೊಂಡಿದ್ದಾರೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ನನಗೆ ಭಯಾ ಇಲ್ಲಾ, ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತಿದ್ದೀನಿ ಆದರೇ ಸತ್ತಿಲ್ಲ ಸಾಯೋದಿಲ್ಲ ಹಿಂದುಳಿದವರ ಪರ ಹೋರಾಟದಲ್ಲಿ ನಾನು ಎಂದಿಗೂ ಮೊದಲಿಗನಾಗಿರುತ್ತೇನೆ ಎಂದು ಹೇಳುವ ಮೂಲಕ ಸಿಎಂ ವಿರುದ್ದ ಕಿಡಿಕಾರಿದರು.
ಹಿಂದುಳಿದ ವರ್ಗಗಳ ಬೃಹತ್ ಸಮಾವೇಶಕ್ಕೆ ಸಿದ್ದತೆ:
ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ಅಸಮಾಧಾನ ಹೊಂದಿರುವ ವಿಧಾನಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರಿತಾಗಿ ಅಸಮಾಧಾನ ಹೊಂದಿರುವ ಅವರು, ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬುವುದು ಆರೋಪವಾಗಿದ್ದು, ಈ ನಿಟ್ಟಿನಲ್ಲಿ ಈ ಸಮುದಾಯದ ಪ್ರಮುಖರು ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಶಿವಮೊಗ್ಗ ಅಥವಾ ಉಡುಪಿಯಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿದ್ದು, ಇದರ ಪೂರ್ವಭಾವಿಯಾಗಿ ಅರಮನೆ ಮೈದಾನದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ.


