Site icon PowerTV

ಪರಮೇಶ್ವರ್ ಹೇಳಿಕೆಗೆ ಯಡಿಯೂರಪ್ಪ ತಿರುಗೇಟು

ಶಿವಮೊಗ್ಗ : ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್​ಗೆ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ತಿರುಗೇಟು ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಎಸ್​ವೈ, ಹಿಂದೂ ಧರ್ಮದ ಅಸ್ತಿತ್ವ, ಮೂಲದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಉದ್ಧಟತನದ ಹೇಳಿಕೆ ಅತ್ಯಂತ ಖಂಡನೀಯ. ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಿಡಿಕಾರಿದ್ದಾರೆ.

ರಾಷ್ಟ್ರಗೀತೆಯ ಅಂತ್ಯದಲ್ಲಿ ‘ಜೈ ಹಿಂದ್’ ಎನ್ನುವ ಜಯಘೋಷ, ನಮ್ಮ ತಾಯ್ನೆಲ, ಇಲ್ಲಿನ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ರಾಷ್ಟ್ರಧರ್ಮ, ಜೀವನ ಪದ್ಧತಿಯ ಸಂಕೇತವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಹೊಣೆಗೇಡಿತನದ ಮಾತುಗಳನ್ನಾಡಿ ಪರಮೇಶ್ವರ್ ಅವರು ತಮ್ಮ ಘನತೆಗೆ ತಾವೇ ಕುಂದು ತಂದುಕೊಂಡಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

ಪರಮೇಶ್ವರ್ ಅವರು ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ. ರಾಷ್ಟ್ರದ ಅಸ್ಮಿತೆಯಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳದೆ, ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

Exit mobile version