Site icon PowerTV

300ಕ್ಕೂ ಅಧಿಕ ಬೈಕ್ ಭಸ್ಮ, ಬರೋಬ್ಬರಿ 15 ಕೋಟಿ ನಷ್ಟ

ಬೆಂಗಳೂರು : ಆಂಧ್ರಪ್ರದೇಶದ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 300ಕ್ಕೂ ಅಧಿಕ ಬೈಕ್​ಗಳು ಸುಟ್ಟು ಕರಕಲಾಗಿವೆ. ಆದರೆ, ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿಯ ಕೆ.ಪಿ ನಗರ ಪ್ರದೇಶದಲ್ಲಿ ಗುರುವಾರ ಮುಂಜಾನೆ ಟಿವಿಎಸ್ ಶೋರೂಂ ಮತ್ತು ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶೋರೂಂನ ಮೊದಲ ಮಹಡಿಯಿಂದ ಬೆಂಕಿ ಕಾಣಿಸಿಕೊಂಡಿತು ಮತ್ತು ಶೀಘ್ರದಲ್ಲೇ ಪಕ್ಕದ ಗೋಡೌನ್‌ಗೆ ವ್ಯಾಪಿಸಿತು.

ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕನಿಷ್ಠ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು. ಗೋಡೌನ್‌ನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಕೂಡ ಸಂಗ್ರಹಿಸಿಟ್ಟಿದ್ದರಿಂದ ಬೆಂಕಿ ಮತ್ತಷ್ಟು ಹರಡಲು ಕಾರಣವಾಯಿತು.

15 ಕೋಟಿ ರೂ. ನಷ್ಟ

ಶೋರೂಂ, ಗೋಡೌನ್, ಸರ್ವಿಸ್ ಸೆಂಟರ್ ಒಂದೇ ಸ್ಥಳದಲ್ಲಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ನಿಂತಿದ್ದವು. ಇದು ವಿಜಯವಾಡ ಮತ್ತು ಏಕೀಕೃತ ಕೃಷ್ಣಾ ಜಿಲ್ಲೆಯ ಟಿವಿಎಸ್ ವಾಹನಗಳ ಮುಖ್ಯ ಕೇಂದ್ರವಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೆಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಚಾರ್ಜ್ ಮಾಡುವಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಶೋರೂಂ ಮಾಲೀಕರಿಗೆ 15 ಕೋಟಿ ರೂ. ನಷ್ಟವಾಗಿದೆ.

Exit mobile version