Site icon PowerTV

ಇಸ್ರೋ ನಮ್ಮ ಹೆಮ್ಮೆ, ಭಾರತ ವಿಕ್ರಮ ಸಾಧಿಸಿದೆ : ಕುಮಾರಸ್ವಾಮಿ

ಬೆಂಗಳೂರು : ಚಂದ್ರಯಾನ-3 ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಳಿದು ಇತಿಹಾಸ ಬರೆದಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೊಂಡಾಡಿದ್ದಾರೆ.

ಭಾರತ ವಿಕ್ರಮ ಸಾಧಿಸಿದೆ. ನಮೆಲ್ಲರ ಕನಸು ನನಸಾಗಿದೆ. 125 ಕೋಟಿ ಭಾರತೀಯರ ನಿರೀಕ್ಷೆ ನಿಜವಾಗಿದೆ. ಇಸ್ರೋ ನಮ್ಮ ಹೆಮ್ಮೆ. ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇಸ್ರೋ ಖಗೋಳ ಸಂಶೋಧನೆಗೆ ನಿರ್ಣಾಯಕ ತಿರುವು ಕೊಟ್ಟಿದೆ. ನಮ್ಮ ವಿಜ್ಞಾನಿಗಳ ಈ ಸಾಧನೆಯನ್ನು ಕೇವಲ ಪದಗಳಿಂದ ಬಣ್ಣಿಸಿದರೆ ಸಾಲದು. ಹಗಲಿರುಳು ಶ್ರಮಿಸಿದ ಅವರ ಯಶಸ್ಸನ್ನು, ಅರ್ಪಣಾ ಮನೋಭಾವವನ್ನು ಹೃದಯಪೂರ್ವಕವಾಗಿ ಕೊಂಡಾಡಿ ಗೌರವಿಸೋಣ ಎಂದು ಹೇಳಿದ್ದಾರೆ.

ಪಯಣ ರೋಮಾಂಚನ

ಅಮೆರಿಕ, ರಷ್ಯಾ, ಚೀನಾ ನಂತರ ಚಂದ್ರನ ಮೇಲೆ ರೋವರ್ ಇಳಿಸಿದ ಈ ಸಾಧನೆ ಐತಿಹಾಸಿಕ. ಇಸ್ರೋದ ಈ ಪಯಣ ನನಗೆ ರೋಮಾಂಚನ ಉಂಟು ಮಾಡಿದೆ. ಸಂಸ್ಥೆಯ ಅಧ್ಯಕ್ಷ ಡಾ.ಸೋಮನಾಥ್ ಹಾಗೂ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು ತಿಳಿಸುತ್ತೇನೆ ಎಂದಿದ್ದಾರೆ.

Exit mobile version