Site icon PowerTV

ಯತ್ನಾಳ್​ಗೆ ಆ.. ಯೋಗ್ಯತೆ ಇಲ್ಲ : ಶಿವರಾಜ ತಂಗಡಗಿ

ಕೊಪ್ಪಳ : ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ಗೆ ಈ ಸರ್ಕಾರ  ಬೀಳಿಸುವ ಯೋಗ್ಯತೆ ಇಲ್ಲ. ಅವರು ಹಗಲು ಗನಸು ಕಾಣುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕುಟುಕಿದ್ದಾರೆ.

ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದಿರುವ ಯತ್ನಾಳ್ ಹೇಳಿಕೆ ವಿಚಾರವಾಗಿ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ವಿರೋಧ ಪಕ್ಷದ ನಾಯಕರನ್ನು ನೇಮಿಸಲಿ ಎಂದು ಚಾಟಿ ಬೀಸಿದ್ದಾರೆ.

ಅವರಿಗೆ ಅಡ್ಡ ದಾರಿ ಹಿಡಿದು ಹೋಗೋದು ಅಭ್ಯಾಸವಿದೆ. ಯತ್ನಾಳ್, ಸಿ.ಟಿ. ರವಿ ಹಾಗೂ ಬಸವರಾಜ ಬೊಮ್ಮಾಯಿಯವರಾಗಲಿ ಮೊದಲು ತಮ್ಮ ಪಕ್ಷ ಸರಿ ಪಡಿಸಿಕೊಳ್ಳಲಿ. ಬಿಜೆಪಿಯವರಿಗೆ ದೇಶವು ಶಾಂತಿಯುತವಾಗಿರೋದು ಬೇಕಿಲ್ಲ. ಸರ್ಕಾರ ಬಂದು ಎರಡೂವರೆ ತಿಂಗಳಾಗಿದೆ. ಪ್ರತಿಪಕ್ಷಗಳಿಗೆ ಸಮಾಧಾನವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ

ಕಮಿಷನ್ ಬಗ್ಗೆ ತನಿಖೆ ಮಾಡಲಿ ಎನ್ನುವ ಯತ್ನಾಳ್ ವಿಚಾರವಾಗಿ ಮಾತನಾಡಿ, ಅವರದೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ. ನಾವು ತನಿಖೆಗೆ ಸಹಕರಿಸುತ್ತೇವೆ. 136 ಸೀಟು ಗೆದ್ದಿದ್ದೇವೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಸರ್ಕಾರ ಬೀಳಿಸೋದು ಅಷ್ಟು ಸುಲಭದ ಕೆಲಸವಲ್ಲ ಎಂದು ಛೇಡಿಸಿದ್ದಾರೆ.

ಎಲ್ಲಾ ನೀರಾವರಿ ಯೋಜನೆಗಳ ಬಗ್ಗೆ ಸಿಎಂ ಹಾಗೂ ಸಂಬಂಧಪಟ್ಟ ಗಮನಕ್ಕೆ ತರಲಾಗಿದೆ. ಅವರು ಕಾಲಾವಕಾಶ ಕೇಳಿದ್ದಾರೆ. ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಅಭಿವೃದ್ಧಿ ಮಾಡಲಾಗುವುದು. ನವಲಿ ಜಲಾಶಯಗಳನ್ನು ಕುರಿತು ಸಭೆ ನಡೆಸಲಾಗುವುದು. ತೋಟಗಾರಿಕೆ ಪಾರ್ಕ್ ಕುರಿತು ಹಿಂದಿನ ಸರ್ಕಾರ ಕೇವಲ ಬಜೆಟ್​ನಲ್ಲಿ ಘೋಷಣೆ ಮಾಡಿದೆ. ಈಗ ಭೂ ಸ್ವಾದೀನ ಮಾಡುವ ಕುರಿತು ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Exit mobile version