Site icon PowerTV

ಪ್ರಯಾಣಿಕನ ಸಿಗರೇಟ್ ಚಟಕ್ಕೆ ನಿಂತ ವಂದೇ ಭಾರತ್ ಎಕ್ಸ್​ಪ್ರೆಸ್​

ಬೆಂಗಳೂರು : ಪ್ರಯಾಣಿಕನ ಸಿಗರೇಟ್ ಚಟಕ್ಕೆ ವಂದೇ ಭಾರತ್ ಎಕ್ಸ್​ಪ್ರೆಸ್​ ಟ್ರೈನ್​ ದಿಢೀರ್ ನಿಂತ ಘಟನೆ ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್‌ ಮಾರ್ಗ ಮಧ್ಯೆ ನಡೆದಿದೆ.

ಟಿಕೆಟ್ ರಹಿತ ಪ್ರಯಾಣಿಕನೊಬ್ಬ ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್‌ಗೆ ಹೊರಟಿದ್ದ ವಂದೇ ಭಾರತ್ ಟ್ರೈನ್​ನ ಶೌಚಾಲಯದೊಳಗೆ ಸಿಗರೇಟ್ ಹಚ್ಚಿದ ಪರಿಣಾಮ ಫೈರ್ ಅಲರಾಂ ಹೊಡೆದು, ಇಡೀ ರೈಲಿನಲ್ಲಿ ಆತಂಕ ಉಂಟಾಗಿತ್ತು.

ಟಿಕೆಟ್ ರಹಿತವಾಗಿ ಟ್ರೈನ್ ಹತ್ತಿದ್ದ ಪ್ರಯಾಣಿಕ ತಾನು ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಭಯದಲ್ಲಿ ಶೌಚಾಲಯದೊಳಗೆ ಹೋಗಿ ಚಿಲಕ ಹಾಕಿ ಕುಳಿತಿದ್ದನು. ಫೈರ್ ಅಲರಾಂಗಳ ಬಗ್ಗೆ ತಿಳಿಯದ ಆತ ಅಲ್ಲಿಯೇ ಸಿಗರೇಟ್ ಹಚ್ಚಿದ್ದಾನೆ. ಸಿಗರೇಟ್ ಹಚ್ಚುತ್ತಿದ್ದಂತೆ ಫೈರ್ ಅಲರಾಂ ಹೊಡೆದುಕೊಂಡಿದೆ.

ಈ ವೇಳೆ ಒಂದು ಕ್ಷಣ ಇಡೀ ಕಂಪಾರ್ಟ್‌ಮೆಂಟ್‌ ನಲ್ಲಿ ಆತಂಕ ಉಂಟಾಗಿತ್ತು. ಸಿಗರೇಟ್ ಹೊಗೆ ಸೂಚನೆ ಸಿಗುತ್ತಿದ್ದಂತೆ ಸ್ವಯಂಚಾಲಿತ ಅಗ್ನಿಶಾಮಕ ಯಂತ್ರಗಳು ಕಂಪಾರ್ಟ್‌ಮೆಂಟ್ ತುಂಬಾ ಏರೋಸಾಲ್ ಸಿಂಪಡಿಸಲು ಪ್ರಾರಂಭಿಸಿದವು. ಆತಂಕಗೊಂಡ ಪ್ರಯಾಣಿಕರು ತಕ್ಷಣ ರೈಲ್ವೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸಿಗರೇಟ್ ಹೊಗೆಯಿಂದ ಅಲರಾಂ

ರೈಲ್ವೆ ಪೊಲೀಸರು ಮನುಬುಲು ಬಳಿ ಟ್ರೈನ್​ ಅನ್ನು ನಿಲ್ಲಿಸಿದ್ದಾರೆ. ಅಗ್ನಿಶಾಮಕ ಯಂತ್ರದೊಂದಿಗೆ ಕಂಪಾರ್ಟ್‌ಮೆಂಟ್ ಒಳಗೆ ಪ್ರವೇಶಿಸಿದ್ದಾರೆ. ಬೆಂಕಿ ಮೂಲವನ್ನು ಪತ್ತೆಹಚ್ಚಲು ಶೌಚಾಲಯದ ಕಿಟಕಿ ಗಾಜು ಒಡೆದು ನೋಡಿದ್ದಾರೆ. ಆಗ ಶೌಚಾಲಯದ ಒಳಗೆ ಪ್ರಯಾಣಿಕ ಕೂತಿದ್ದ. ಸಿಗರೇಟ್ ಸೇದುತ್ತಿದ್ದರಿಂದ ಅಲರಾಂ ಹೊಡೆದಿರುವುದು ಪೊಲೀಸರಿಗೆ ಖಚಿತವಾಗಿದೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನಲ್ಲೂರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ತುಣುಕುಗಳು ಹರಿದಾಡಿವೆ.

Exit mobile version