ಪ್ರಧಾನಿ ಮೋದಿ ಏನು ದೇವರಲ್ಲ : ನಟ ಪ್ರಕಾಶ್ ರಾಜ್

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಏನು ದೇವರಲ್ಲ ಎಂದು ಬಿಜೆಪಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರವಾಗಿದ್ದು, ಇದರಿಂದ ಜನರಿಗೆ ಒಳ್ಳೆಯದಾಗುತ್ತಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳೇ ವಿಫಲವಾಗಿವೆ. ಆದರೆ, ಈ ಬಗ್ಗೆ ಮಾತನಾಡುವವರು ಯಾರು? ಪ್ರಧಾನಿ ನರೇಂದ್ರ ಮೋದಿ ಏನು ದೇವರಲ್ಲ. ಅವರು ಐದು ವರ್ಷ ಮಾತ್ರ ಅಧಿಕಾರದಲ್ಲಿರುತ್ತಾರೆ. ಜನಸಾಮಾನ್ಯರು ಕೂಡ ಪ್ರಶ್ನೆ ಮಾಡಬಹುದಾಗಿದೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್​ ಭಾಗ್ಯಗಳು ಬಡವರನ್ನು ತಲುಪದಿದ್ದಾಗ ಪ್ರಶ್ನೆ ಮಾಡುವುದು ಕೂಡ ಸರಿಯಾಗಿದೆ. ಯಾವುದೇ ಸರ್ಕಾರಗಳು ಜನರ ಕಲ್ಯಾಣಕ್ಕಾಗಿಯೇ ಇರಬೇಕೇ ಹೊರತು ಧರ್ಮದ ಪ್ರಚಾರಕ್ಕಲ್ಲ. ಸರ್ಕಾರದ ಗ್ಯಾರಂಟಿಗಳು ಜನರ ಕಲ್ಯಾಣಕ್ಕಾಗಿಯೇ ಇರುತ್ತವೆ. ಅವು ಬಡವರ ಪಾಲಿಗೆ ವರದಾನವಾಗಿರುತ್ತವೆ. ಆದರೆ ಈ ಯೋಜನೆಗಳು ಎಲ್ಲರನ್ನೂ ತಲುಪಬೇಕು ಅಷ್ಟೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಷ ಹಾಕಿ ಉಣಬಡಿಸುತ್ತಾರೆ

ಪಠ್ಯ ಪುಸ್ತಕ ವಿಷಯ ಕುರಿತು ಮಾತನಾಡಿ, ಪಠ್ಯ ಪುಸ್ತಕ ವಿವಾದ ಈಗಿನದಲ್ಲ. ಅದು ಒಮ್ಮೆ ಬದಲಾದ ಕಾರಣಕ್ಕಾಗಿ ಈಗ ಮತ್ತೆ ಪ್ರಶ್ನೆ ಮಾಡಲಾಗುತ್ತಿದೆ. ಪಠ್ಯಗಳನ್ನು ನಿರೂಪಿಸಬೇಕಾದವರು ರಾಜಕಾರಣಿಗಳಲ್ಲ. ರಾಜಕಾರಣಿಗಳು ಅವರಿಗೆ ಬೇಕಾದಂತೆ ವಿಷಯಗಳನ್ನು ವಿಷ ಹಾಕಿ ಉಣಬಡಿಸುತ್ತಾರೆ ಎಂದು ಹೇಳಿದ್ದಾರೆ.

ಹಿಂದೂ ವಿರೋಧಿ ಹಣೆ ಪಟ್ಟಿ

ಯಾವುದೇ ಸರ್ಕಾರ ರಾಜಕೀಯ ಪಕ್ಷಗಳು ಪಠ್ಯ ಪುಸ್ತಕಗಳನ್ನು ಕೂಡ ಧರ್ಮದ ಬೋಧನೆಗೆ ಬಳಸುವುದಲ್ಲ. ಅಥವಾ ಕೇಸರಿ ಬಣ್ಣ ಬಳಿಯುವುದೂ ಅಲ್ಲ. ಅದು ಮಕ್ಕಳ ವಿಕಾಸಕ್ಕೆ ಕಾರಣವಾಗಬೇಕೇ ಹೊರತು ವಿನಾಶಕ್ಕಲ್ಲ. ಒಂದು ಪಕ್ಷದ ವಿರುದ್ಧ ಮಾತನಾಡಿದರೆ ಹಿಂದೂ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES