ಬೀದರ್ ಜನರಿಗೆ ಕಾಡುತ್ತಿದೆ ಮದ್ರಾಸ್ ಐ ಭಯ! : 7 ಸಾವಿರ ಜನರಲ್ಲಿ ಸೋಂಕು ಪತ್ತೆ

ಬೀದರ್ : ರಾಜ್ಯದಲ್ಲಿ ಕಾಣಿಸಿಕೊಂಡಿರುವ ಮದ್ರಾಸ್‌ ಐ ಸೋಂಕು ಗಡಿ ಜಿಲ್ಲೆ ಬೀದರ್‌ನಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, 20 ದಿನಗಳ ಅವಧಿಯಲ್ಲಿ 7 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು‌ ಕಾಣಿಸಿಕೊಂಡಿದೆ.

ಕಣ್ಣಿನ‌ ಉರಿ, ನಿರಂತರ ನೀರು ಬರುವುದು ಸೇರಿದಂತೆ ಇತರ ರೋಗ ಲಕ್ಷಣಗಳನ್ನ ಹೊಂದಿರುವ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ ಸೋಂಕು ದಿನದಿಂದ ಉಲ್ಬಣಗೊಳ್ಳುತ್ತಿದೆ. ಚಿಕ್ಕಮಕ್ಕಳು ಹಾಗೂ ವಯಸ್ಕರಲ್ಲಿ ಹೆಚ್ಚಿನದಾಗಿ ರೋಗಲಕ್ಷಣ ಕಂಡುಬರುತ್ತಿದೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಕಿರಣ ಪಾಟೀಲ ಹೇಳಿದ್ದಾರೆ.

ಬೀದರ್ ನಗರದ ಬ್ರಿಮ್ಸ್ ಜಿಲ್ಲಾಸ್ಪತ್ರೆಗೆ ಮದ್ರಾಸ್ ಐ ಸೋಂಕಿನ ರೋಗಲಕ್ಷಣ ಹೊಂದಿರುವ ಸುಮಾರು 150 ಕ್ಕೂ ಹೆಚ್ಚು ರೋಗಿಗಳು ಪ್ರತಿನಿತ್ಯ ಭೇಟಿ‌ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲೆಯ ಖಾಸಗಿ ಆಸ್ಪತ್ರೆ ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿಗು ರೋಗಿಗಳು ಭೇಟಿ ನೀಡಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ.

ಶೇ.50 ರಷ್ಟು ಜನರು ರೋಗ ಲಕ್ಷಣ

ಜಿಲ್ಲೆಯಲ್ಲಿ ಈಗಾಗಲೇ ಶೇ.50 ರಷ್ಟು ಜನರು ರೋಗ ಲಕ್ಷಣದಿಂದ ಗುಣಮುಖರಾಗಿದ್ದಾರೆ. ಸರಿ ಸುಮಾರು 4ರಿಂದ 5 ದಿನಗಳ ಕಾಲ ಕಾಣಿಸಿಕೊಳ್ಳುವ ಮದ್ರಾಸ್ ಐ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ಹಾಗಾಗಿ, ಸೋಂಕು‌ಹೊಂದಿರುವ ವ್ಯಕ್ತಿಯು ರೋಗ ಲಕ್ಷಣ ಕಂಡು ಬಂದ ಮೇಲೆ ಮನೆಯಲ್ಲಿ ಇದ್ದು, ವಿಶ್ರಾಂತಿ ಪಡೆಯುವುದು ಉತ್ತಮ. ಇದರಿಂದ ರೋಗ ಹರಡದಂತೆ ತಡೆಯಬಹುದು ಎಂದು ಕಿರಣ ಪಾಟೀಲ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES