Site icon PowerTV

ಸ್ನೇಹಿತರ ದಿನದಂದೇ ಸ್ನೇಹಿತನ ಬರ್ಬರ ಹತ್ಯೆ

ಮಂಡ್ಯ : ಮದ್ಯ ಸೇವನೆ ಅಮಲಿನಲ್ಲಿ ಸ್ನೇಹಿತರ ದಿನದಂದೇ ಸ್ನೇಹಿತನನ್ನು ಉಳಿಯಿಂದ ಚುಚ್ಚಿ ಕೊಲೆಗೈದಿರುವ ದಾರಣು ಘಟನೆ ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದೆ.

ಜಯಂತ್ (24) ಕೊಲೆಯಾಗಿರುವ ದುರ್ದೈವಿ. ಕೀರ್ತಿ (24) ಕೊಲೆ ಮಾಡಿರುವ ಸ್ನೇಹಿತ. ಘಟನೆ ಬಳಿಕ ಆರೋಪಿ ಕೀರ್ತಿ ಎಸ್ಕೇಪ್ ಆಗಿದ್ದಾನೆ.

ಕೀರ್ತಿ ಹಾಗೂ ಜಯಂತ್ ಇಬ್ಬರೂ ಸ್ನೇಹಿತರು. ಆರೋಪಿ ಕೀರ್ತಿ ಮರದ ಆಚಾರಿ ಕೆಲಸ ಮಾಡುತ್ತಿದ್ದನು. ಇಂದು ಇಬ್ಬರು ಅಂಗಡಿಯಲ್ಲಿ ಎಣ್ಣೆ ಪಾರ್ಟಿ ಮಾಡ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಈ ಘಟನೆ ಕೊಲೆಯಲ್ಲಿ ಅಂತ್ಯವಾಗಿದೆ.

ಆರೋಪಿ ಕೀರ್ತಿ ಎಸ್ಕೇಪ್

ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕುಪಿತನಾದ ಆರೋಪಿ ಕೀರ್ತಿ ಮರದ ಕೆತ್ತನೆ ಮಾಡುವ ಉಳಿಯಿಂದ ಜಯಂತ್​ಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಜಯಂತ್​ನನ್ನು ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ಜಯಂತ್ ಮೃತಪಟ್ಟಿದ್ದಾನೆ.

ಬಳಿಕ, ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

Exit mobile version