Site icon PowerTV

ಉಕ್ಕಿ ಹರಿಯುತ್ತಿರುವ ತುಂಗಭದ್ರಾ, ಜಲಾವೃತಗೊಂಡ ಜಮೀನುಗಳು

ದಾವಣಗೆರೆ : ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ತುಂಗಭದ್ರಾ ನೀರಿನ ಮಟ್ಟ ಹೆಚ್ಚಾಗಿದೆ. ಪರಿಣಾಮ, ರಸ್ತೆ ಸಂಪರ್ಕಕಡಿತವಾಗಿ 50 ಎಕರೆಗಿಂತ ಅಧಿಕ ಕೃಷಿ ಭೂಮಿ ಜಲಾವೃತವಾಗಿದೆ.

ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿಯಿಂದ ಹರಿಹರ ತಾಲೂಕಿನ ಉಕ್ಕಡಗಾತ್ರಿ ಹಾಗೂ ಫತೇಪುರ ಗ್ರಾಮದ ರಸ್ತೆ ಸಂಪರ್ಕ ಪೂರ್ಣ ಕಡಿತವಾಗಿದೆ. ಗದ್ದೆಗಳು ಮುಳುಗಡೆಯಾಗಿವೆ. ಜಮೀನುಗಳ ಮುಳುಗಡೆಯಿಂದ ರೈತರು ಕಂಗಾಲಗಿದ್ದಾರೆ. ರಸ್ತೆ ಜಲಾವೃತವಾದ ಕಾರಣ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟೆ ಮಾರ್ಗದಿಂದ ಉಕ್ಕಡಗಾತ್ರಿಗೆ ವಾಹನಗಳು ಸಂಚರಿಸುತ್ತಿವೆ.

ಇದನ್ನು ಓದಿ : ರಾಜ್ಯದ 57 ಖೈದಿಗಳಿಗೆ ಬಿಡುಗಡೆ ಭಾಗ್ಯ!

ನದಿ ನೀರು ಮತ್ತಷ್ಟು ಹೆಚ್ಚಾದರೆ ತುಮ್ಮನಿಕಟ್ಟೆ ರಸ್ತೆ ಮಾರ್ಗ ಸಂಪೂರ್ಣ ಮುಳುಗುವ ಭೀತಿಯಿದೆ. ಮೂರು ದಶಕಗಳಿಂದ ಜನರು ಹಾಗೂ ಭಕ್ತರು ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ವರ್ಷದಲ್ಲಿ ಮೂರು ಬಾರಿ ತುಂಗಭದ್ರಾ ನದಿ ನೀರಿನಿಂದ ಸೇತುವೆ ಮುಳುಗಡೆಯಾಗುತ್ತಿದೆ. ಆದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯತ್ತಯ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀರಿನಿಂದ ಸೇತುವೆ ಮುಳುಗಿದ ಮೇಲೆ ಸೇತುವೆ ಎತ್ತರಿಸಿ ದುರಸ್ತಿ ಭರವಸೆ ನೀಡುತ್ತಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೂರು ದಶಕಗಳನ್ನು ಕಳೆದಿದ್ದಾರೆ. ಈ ಬಾರಿಯಾದರು ಸೇತುವೆ ಎತ್ತರಿಸಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Exit mobile version