Site icon PowerTV

ಬಸವಸಾಗರ ಜಲಾಶಯಕ್ಕೆ ಜೀವಕಳೆ, 1.80 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ

ಯಾದಗಿರಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಯಾದಗಿರಿಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಜೀವಕಳೆ ಬಂದಿದೆ.

ಡೆಡ್ ಸ್ಟೋರೇಜ್ ದಾಟಿದ್ದ ಜಲಾಶಯ ಈಗ ಶೇ.80 ಭರ್ತಿಯಾಗಿದೆ. ಅಲ್ಲದೇ ಕೃಷ್ಣಾ ನದಿಗೆ ಬಸವಸಾಗರ ಜಲಾಶಯದ 24 ಗೇಟ್‍ಗಳ ಮೂಲಕ 1 ಲಕ್ಷದ 80 ಸಾವಿರ ಕ್ಯೂಸೆಕ್ಸ್ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ.

ಶೀಲಹಳ್ಳಿ ಸೇತುವೆ ಮುಳುಗಡೆ

ಬಸವಸಾಗರ ಡ್ಯಾಂನಿಂದ ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಿರುವುದರಿಂದ ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಶೀಲಹಳ್ಳಿ, ಹಂಚಿನಾಳ, ಯರಗೋಡಿ, ಯಳಗುಂದಿ, ಕಡದರಗಡ್ಡಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಅಲ್ಲದೇ ಲಿಂಗಸುಗೂರು ತಾಲೂಕಿನ ನಡುಗಡ್ಡೆ ಗ್ರಾಮಗಳ ಸಂಪರ್ಕ ಸಹ ಕಡಿತಗೊಂಡಿದೆ.

ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾಯಚೂರಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿಯೂ ಹೆಚ್ಚಾಗಿದೆ. ಸೇತುವೆ ಬಳಿ ಯಾರು ಹೋಗದಂತೆ ಪೊಲೀಸರ ಕಾವಲು ಹಾಕಲಾಗಿದೆ. ನಾರಾಯಣಪುರ ಜಲಾಶಯದಿಂದ ಹಂತ ಹಂತವಾಗಿ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆಯಿದೆ.

Exit mobile version