Site icon PowerTV

ಬೆಂಗಳೂರಿನಲ್ಲಿ ಕಡು ಭ್ರಷ್ಟಾಚಾರಿಗಳ ಸಮ್ಮಿಲನ : ಪ್ರಧಾನಿ ಮೋದಿ

ನವದೆಹಲಿ : ಬೆಂಗಳೂರಿನಲ್ಲಿ ಕಡು ಭ್ರಷ್ಟರು ಸಭೆ ನಡೆಸಿದ್ದಾರೆ ಎಂದು ವಿಪಕ್ಷಗಳ ಮಹಾಘಟಬಂಧನ್ ಸಭೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಪ್ರಜಾಪ್ರಭುತ್ವ ಎಂದರೆ ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’. ಆದ್ರೆ, ಪ್ರತಿಪಕ್ಷಗಳ ಧ್ಯೇಯವಾಕ್ಯ ‘ಕುಟುಂಬ ಮೊದಲು ರಾಷ್ಟ್ರ ಏನೂ ಅಲ್ಲ. ವಿಪಕ್ಷಗಳಿಗೆ ವೈಯಕ್ತಿಕ ಹಿತಾಸಕ್ತಿ ಮುಖ್ಯವೇ ಹೊರತು, ದೇಶದ ಹಿತಾಸಕ್ತಿ ಅಲ್ಲ’ ಎಂದು ಮೋದಿ ಕುಟುಕಿದ್ದಾರೆ.

ವಿಪಕ್ಷಗಳು ಭ್ರಷ್ಟಾಚಾರದ ಅಂಗಡಿ ತೆರೆದು ಜಾತಿವಾದದ ವಿಷ ಬೀಜ‌ ಮತ್ತು ಅನಿಯಮಿತ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೇರಿರುವ ವಿಪಕ್ಷನಾಯಕರು ಕೇವಲ ಫೋಟೋ ಶೂಟ್‌ಗಾಗಿ ಮಾತ್ರ ಒಂದಾಗಿದ್ದೇವೆ ಎಂದು ತೋರಿಸುತ್ತಿದ್ದಾರೆ. ಇವರ ಮುಖಗಳನ್ನೆಲ್ಲಾ ನೋಡುವಾಗ ಭಾರತೀಯರಿಗೆ ನೆನಪಾಗುವುದು ಭ್ರಷ್ಟಾಚಾರ ಮಾತ್ರ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : INDIA ಅಂದ್ರೆ BJP, INDIA ಅಂದ್ರೆ ಮೋದಿ ಎನ್ನುವಂತಾಗಿದೆ : ರಾಹುಲ್ ಗಾಂಧಿ

ಕಡು ಭ್ರಷ್ಟಾಚಾರಿಗಳ ಸಮ್ಮಿಲನ

ವಿಪಕ್ಷಗಳ ಸಭೆಯನ್ನು ದೇಶದ ಜನರು ಕಡು ಭ್ರಷ್ಟಾಚಾರಿಗಳ ಸಮ್ಮಿಲನ ಎನ್ನುತ್ತಿದ್ದಾರೆ. ಈ ಸಭೆಯ ವಿಶೇಷತೆಯೆಂದರೆ, ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಯಾರಾದರೂ ಜಾಮೀನಿನ ಮೇಲೆ ಹೊರಗಿದ್ದರೆ ಅವರನ್ನು ಗೌರವದಿಂದ ಕಾಣುತ್ತಾರೆ. ಇಡೀ ಕುಟುಂಬ ಜಾಮೀನಿನ ಮೇಲೆ ಹೊರಗಿದ್ದರೆ ಅವರಿಗೆ ಹೆಚ್ಚು ಗೌರವ. ಯಾರಾದರೂ ಒಂದು ಸಮುದಾಯವನ್ನು ಅವಮಾನಿಸಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದರೆ ಅವರಿಗೆ ವಿಶೇಷ ಗೌರವ ನೀಡಲಾಗುತ್ತದೆ ಎಂದು ಚಾಟಿ ಬೀಸಿದ್ದಾರೆ.

Exit mobile version