Site icon PowerTV

ಚಾಮುಂಡಿ ಬೆಟ್ಟದ ಮೇಲ್ಭಾಗ ಸಬ್ ಲೀಸ್ ಮೂಲಕ ವ್ಯವಹಾರ : ಪ್ರತಾಪ್ ಸಿಂಹ

ಮೈಸೂರು : ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಬೆಂಗಳೂರಿನ ಕೆಲವರು ಆಸ್ತಿ ಮಾಡಿಕೊಂಡಿದ್ದಾರೆ. ಸಬ್ ಲೀಸ್ ಮೂಲಕ ವ್ಯವಹಾರ ‌ನಡೆಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ನೆಲೆಸಿರುವವರನ್ನು ತೆರವುಗೊಳಿಸಬೇಕಿದೆ ಎಂದರು.

ಚಾಮುಂಡಿಬೆಟ್ಟಕ್ಕೆ ಪ್ರತ್ಯೇಕ ಪ್ರಾಧಿಕಾರ ಮಾಡಿರುವುದು ಸ್ವಾಗತಾರ್ಹ. ಈಗಾಗಲೇ ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 45 ಕೋಟಿ ಅನುದಾನ ಬಂದಿದೆ. ಹೀಗಾಗಿ, ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಚಾಮುಂಡಿ ಬೆಟ್ಟಕ್ಕೆ ನಟ ಸಂಜಯ್ ದತ್ ಭೇಟಿ

ಎಲ್ಲಿಂದಲೋ‌ ಬಂದು ನೆಲೆಸಿದ್ದಾರೆ

ದೇವಾಲಯದ ಅರ್ಚಕ ಸಮುದಾಯ ಹಾಗೂ ನಾಯಕ ಸಮುದಾಯಕ್ಕೆ ಸೇರಿದ ಮೂಲ ನಿವಾಸಿಗಳನ್ನು ಹೊರತುಪಡಿಸಿ, ಇತ್ತೀಚೆಗೆ ಎಲ್ಲಿಂದಲೋ‌ ಬಂದು ಬೆಟ್ಟದಲ್ಲಿ ನೆಲೆಸಿರುವವರನ್ನು ತೆರವುಗೊಳಿಸಬೇಕು. ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ದೇಗುಲದ ಮುಂಭಾಗದಲ್ಲಿ ಮಂಟಪವನ್ನು ಕಟ್ಟುವ ಅಗತ್ಯವಿರಲಿಲ್ಲ. ಬೆಟ್ಟದ ಮೇಲ್ಭಾಗದಲ್ಲಿ ಬೆಂಗಳೂರಿನ ಕೆಲವರು ಆಸ್ತಿ ಮಾಡಿಕೊಂಡಿದ್ದಾರೆ. ಹೀಗಾಗಿ, ಬೆಟ್ಟಕ್ಕೆ ಸಂಬಂಧಪಡದವರನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

Exit mobile version