Site icon PowerTV

2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ : ಕಂಗಲಾದ ಅಜ್ಜಿ

ಕೊಪ್ಪಳ: 2 ಬಲ್ಬ್ ಇರುವ ತಗಡಿನ ಶೆಡ್‍ನಲ್ಲಿ ವಾಸಿಸುವ ವೃದ್ಧೆಯೊಬ್ಬರ ಮನೆಗೆ ಜೆಸ್ಕಾಂ ಸಿಬ್ಬಂದಿ 1 ಲಕ್ಷದ 3 ಸಾವಿರದ 315 ರೂ. ಬಿಲ್ ನೀಡಿದ ಘಟನೆ ಕೊಪ್ಪಳದಲ್ಲಿ (Koppala) ನಡೆದಿದೆ. ಇದರಿಂದ ಆತಂಕಕ್ಕೊಳಗಾದ ವ್ರದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ (Electricity Bill) ಕಟ್ಟಲು ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ.

ವೃದ್ಧೆ ಗಿರಿಜಮ್ಮ ಎಂಬುವರ ಮನೆಗೆ ಈ ಬಿಲ್ ಬಂದಿದ್ದು, ಕಳೆದ ಆರು ತಿಂಗಳಿಂದ ಜೆಸ್ಕಾಂ ಸಿಬ್ಬಂದಿ ಇಷ್ಟೆಲ್ಲ ಬಿಲ್ ನೀಡುತ್ತಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದು, ಮೊದಲು ಪ್ರತಿ ತಿಂಗಳು 70 ರೂ. ನಿಂದ 80 ರೂ. ಬಿಲ್ ಬರುತ್ತಿತ್ತು. ಅದರಲ್ಲೂ ನಾವಿರುವುದು ಇಬ್ಬರೇ ನಾವೆಷ್ಟು ಕರೆಂಟ್ ಬಳಸುತ್ತೇವೆ? ಈಗ ಇದ್ದಕ್ಕಿದ್ದಂತೆ ಇಷ್ಟೆಲ್ಲ ಜಾಸ್ತಿಯಾಗಿದೆ ಎಂದು ವೃದ್ಧೆ ಕಣ್ಣೀರಿಟ್ಟಿದ್ದಾರೆ.

ಭಾಗ್ಯ ಜ್ಯೋತಿ ಯೋಜನೆಯ ಪ್ರಕಾರ 18 ಯೂನಿಟ್ ಸರ್ಕಾರವೇ ಪಾವತಿ ಮಾಡುತ್ತಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ. ಮೀಟರ್ ಹಾಕಿದಾಗಿಂದ ಹತ್ತರಿಂದ ಇಪ್ಪತ್ತು ಸಾವಿರ ರೂ. ಬಿಲ್ ಬರುತ್ತಿದೆ. ಆದರೆ ಬಿಲ್ ಕೊಟ್ಟು ಹೋಗುವ ಸಿಬ್ಬಂದಿ ಹಣ ಕೇಳಲು ಮಾತ್ರ ಬರುತ್ತಿಲ್ಲ. ಒಂದು ವೇಳೆ ಬಂದರೆ ಎಂಬ ಭಯದಲ್ಲಿ ವೃದ್ಧೆ ಈ ಸಮಸ್ಯೆ ಬಗೆಹರಿಸುವಂತೆ ಸಿಕ್ಕ ಸಿಕ್ಕವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಜೆಸ್ಕಾಂ ಸಿಬ್ಬಂದಿಗಳ ಯಡವಟ್ಟಿನಿಂದ ಈ ಬಡ ಜೀವ ಪರದಾಡುವಂತಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಈ ಸಮಸ್ಯೆಗೊಂದು ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version