Site icon PowerTV

ಕತ್ತೆಗಳಿಗೆ ಶಾಸ್ತ್ರೋಕ್ತ ಮದುವೆ ಮಾಡಿದ ಗ್ರಾಮಸ್ಥರು

ಬಾಗಲಕೋಟೆ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಿನ್ನೆ  ಭರ್ಜರಿ ಮಳೆಯಾಗಿದೆ. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಮಳೆಯ ಸುಳಿವೇ ಇಲ್ಲ. ದೇಶದ ಪಶ್ಚಿಮ ಕರಾವಳಿಯಲ್ಲಿ ಅನಾಹುತ ಸೃಷ್ಟಿಸಿದ ಬಿಫರ್ ಜೋಯ್ ಚಂಡಮಾರುತ ಮುಂಗಾರು ಮಾರುತಗಳನ್ನು ಚದುರಿಸಿರುವ ಕಾರಣದಿಂದಾಗಿ, ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದೆ.

ಇದರಿಂದಾಗಿ ರಾಜ್ಯದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದುವರೆಗೆ ಬಿತ್ತನೇ ಕಾರ್ಯ ಆರಂಭವಾಗಿಲ್ಲ. ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ. ಈ ನಡುವೆ ಉತ್ತಮ ಮಳೆಗಾಗಿ ಪ್ರಾರ್ಥಿಸಿ ರಾಜ್ಯದ ಹಲವೆಡೆ ಜನ ದೇವರ ಮೊರೆಹೋಗಿದ್ದಾರೆ. ವಿಶೇಷ ಆಚರಣೆಗಳನ್ನು ಮಾಡುತ್ತಿದ್ದಾರೆ. ಕಪ್ಪೆ, ಕತ್ತೆಗಳ ಮದುವೆ ಮಾಡಿಸುತ್ತಿದ್ದಾರೆ.

ಇದನ್ನೂ ಓದಿ: ಮಗಳ ಸಾಧನೆ ನೆನೆದು ಕಣ್ಣೀರಿಟ್ಟ ಪಿಎಸ್ಐ ವೆಂಕಟೇಶ್

ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಜಗದಾಳ-ನಾವಲಗಿ ಗ್ರಾಮದಲ್ಲಿ ರೈತರು ಕೂಡ ಇದೇ ರೀತಿ ಕತ್ತೆಗಳ ಮದುವೆ ಮಾಡಿಸಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಮನುಷ್ಯರಿಗೆ ಮಾಡಿದಂತೆಯೇ ಕತ್ತೆಗಳ ಮದುವೆಯಲ್ಲೂ ಎಲ್ಲ ರೀತಿಯ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಿದ್ದು ವಿಶೇಷ.

ಹೆಣ್ಣು ಕತ್ತೆ ಮತ್ತು ಗಂಡು ಕತ್ತೆ, ಎರಡೂ ಕಡೆಯಲ್ಲೂ ಗ್ರಾಮದ ಹಿರಿಯರು ಮದುವೆಯ ನೇತೃತ್ವ ವಹಿಸಿದ್ದರು. ಹೆಣ್ಣುಕತ್ತೆಗೆ ಸಂಪ್ರದಾಯದಂತೆ ಸೀರೆ, ಬಳೆ ತೊಡಿಸಿ ಸಿಂಗರಿಸಿದ್ದರೆ, ಗಂಡು ಕತ್ತೆಗೆ ಧೋತಿ, ಟೋಪಿ ಹಾಕಿ ಅಲಂಕರಿಸಲಾಗಿತ್ತು. ಬಳಿಕ ಮಂಗಳಸೂತ್ರ ಧಾರಣೆಯ ವಿಧಿ ವಿಧಾನಗಳೂ ನೆರವೇರಿದವು. ಮದುವೆಯ ಬಳಿಕ ನೂತನ ವಧುವರರನ್ನು  ಎರಡೂ ಗ್ರಾಮಗಳ ಮುಖ್ಯ ಬೀದಿಗಳಲ್ಲಿ ಭಾಜಾಭಜಂತ್ರಿಗಳೊಂದಿಗೆ ಅದ್ದೂರಿ ಮೆರವಣಿಗೆಯನ್ನೂ ಮಾಡಲಾಯ್ತು.

ಈ ರೀತಿ ಕತ್ತೆಗಳ ಮದುವೆ ಮಾಡಿಸಿದ್ರೆ, ವರುಣದೇವ ಸಂತುಷ್ಟನಾಗಿ , ಮಳೆ ಬರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ.

 

Exit mobile version